ನೂರಾರು ಬಸ್ ಗಳಲ್ಲಿ ಜನರನ್ನು ಸಿಎಂ ತವರು ಜಿಲ್ಲೆಯಿಂದ ಹಾಸನಕ್ಕೆ ಕರೆತರಲಾಗುತ್ತಿದೆ. ಇಂದು ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಇದಕ್ಕಾಗಿ ಬೃಹತ್ ವೇದಿಕೆ, ಕಟೌಟ್ ಗಳು ರೆಡಿಯಾಗಿದ್ದು, ಕಾಂಗ್ರೆಸ್ ನ ಬಹುತೇಕ ನಾಯಕರು ಭಾಗಿಯಾಗಲಿದ್ದಾರೆ.
ಎಐಸಿಸಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಕೂಡಾ ಇಂದಿನ ಸಮಾವೇಶಕ್ಕೆ ಬರಲಿದ್ದಾರೆ. ಸಿಎಂ ಮತ್ತು ಗೃಹಸಚಿವ ಪರಮೇಶ್ವರ್ ಈಗಾಗಲೇ ಹಾಸನದತ್ತ ಪ್ರಯಾಣ ಬೆಳೆಸಿದ್ದಾರೆ. ಸಮಾವೇಶದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು, ಬೆಂಬಲಿಗರನ್ನು ವಿಶೇಷ ಬಸ್ ಗಳಲ್ಲಿ ಕರೆತರಲಾಗುತ್ತಿದೆ.
ಈಗಾಗಲೇ ಒಂದು ಸಾವಿರ ಬಸ್ ಹೊರಟಿದ್ದು, ಇನ್ನೂ ಮುನ್ನೂರು ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು 40 ರಿಂದ 50 ಸಾವಿರ ಜನರನ್ನು ಸೇರಿಸಲಾಗುತ್ತಿದೆ. ನಮಗೆ ತೊಂದರೆ ಕೊಡುತ್ತಿರುವ ವಿರೋಧ ಪಕ್ಷಗಳಿಗೆ ದೊಡ್ಡ ಮಟ್ಟದ ಸಂದೇಶ ಕೊಡಬೇಕೆಂದು ಈ ಸಮಾವೇಶ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.