ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್: ದೊಡ್ಮನೆ ಸೊಸೆಗೆ ಎದುರಾಗಿದೆ ಹೊಸ ಸವಾಲು

Sampriya

ಶನಿವಾರ, 13 ಏಪ್ರಿಲ್ 2024 (16:27 IST)
Photo Courtesy X
ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಕೈತಪ್ಪಿ ಮುನಿಸಿಕೊಂಡಿದ್ದ ಶಿಕ್ಷಣ ತಜ್ಞ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಬಲ ಬೆಂಬಲಿಗ ಜಿ.ಬಿ.ವಿನಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು.

ಇವರು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಲವು ಚರ್ಚೆ, ಗೊಂದಲಗಳ ನಂತರ ಕಾಂಗ್ರೆಸ್ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ಇದರಿಂದ ಮುನಿಸಿಕೊಂಡಿದ್ದ ಜಿ.ಬಿ.ವಿನಯ್ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದೀಗ ವಿನಯ್ ಅವರು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದು, ಕಾಂಗ್ರೆಸ್‌ಗೆ ಇದರಿಂದ ಹೊಸ ತಲೆನೋವು ಶುರುವಾಗಿದೆ.

ಇನ್ನೂ ನಾಮಪತ್ರ ಸಲ್ಲಿಕೆ ನಂತರ ಎಕ್ಸ್‌ನಲ್ಲಿ ಬರೆದುಕೊಂಡಿರುವ ವಿನಯ್ ಕುಮಾರ್ ಅವರು, ಇಂದು ದಾವಣಗೆರೆ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವು ನನ್ನ ಮೇಲೆ ಸದಾ ಇರಲಿ ಎಂದು ಕೋರಿಕೊಳ್ಳುತ್ತೇನೆ.

ಎಲ್ಲ ಅಡೆತಡೆಗಳನನ್ನು ದಾಟಿ ಹೋದಾಗಲೇ ಗುರಿ ಮುಟ್ಟಲು ಸಾಧ್ಯ. ದಾರಿಯಲ್ಲಿ ಉಂಟಾಗುವ ಕಷ್ಟಗಳನ್ನು ಎದುರಿಸಿ ಮುನ್ನಡೆದರೆ ಗೆಲುವು ನಿಶ್ಚಿತ. ನಿಮ್ಮೆಲ್ಲರ ಉತ್ಸಾಹ ನಮಗೆ ಇನ್ನಷ್ಟು ಬಲವನ್ನು ತುಂಬಿದೆ. ನಿಮ್ಮೆಲ್ಲರ ಜೊತೆಯಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ದಾವಣಗೆರೆಯ ಪ್ರಗತಿಗೆ ನಮ್ಮದೇ ರೀತಿಯಲ್ಲಿ ಕೊಡುಗೆ ಕೊಟ್ಟು ದಾವಣಗೆರೆಯನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯೋಣ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ