ಇಟಲಿ ಟೆಂಪಲ್ ಸುತ್ತಿ ಕಪ್ಪ ಒಪ್ಪಿಸಿದರೆ ಡಿಕೆ ಶಿವಕುಮಾರ್ ಸಿಎಂ: ಆರ್ ಅಶೋಕ

Sampriya

ಗುರುವಾರ, 23 ಅಕ್ಟೋಬರ್ 2025 (19:19 IST)
ದಾವಣಗೆರೆ: ಕಾಂಗ್ರೆಸ್‌ಗೆ ಚಾಮುಂಡೇಶ್ವರಿ, ಮಾರಮ್ಮ ದೇಗುಲ ಇಷ್ಟವಾಗುವುದಿಲ್ಲ, ದೆಹಲಿಯಲ್ಲಿರುವ  ‘ಇಟಲಿ ಟೆಂಪಲ್‌’ ಸುತ್ತಿ ಸರಿಯಾದ ಕಪ್ಪ ಒಪ್ಪಿಸಿದರೆ ಮಾತ್ರ ಡಿಸಿಎಂ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಟೀಕಿಸಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್‌ ದಾರಿತಪ್ಪಿದ ಮಗನಂತೆ ವರ್ತಿಸುತ್ತಿರುವ ಅವರು, ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುವುದು ಬಿಟ್ಟು ದೇಗುಲಗಳಿಗೆ ಅಲೆದಾಡುತ್ತಿದ್ದಾರೆ.

ದೇಗುಲ ದರ್ಶನ (ಟೆಂಪಲ್‌ ರನ್‌) ಮಾಡಿದರೆ ಪ್ರಯೋಜನವಿಲ್ಲ ಎಂಬುದನ್ನು ಕಾಂಗ್ರೆಸ್‌ ನಾಯಕರೇ ಹೇಳಿದ್ದಾರೆ. ಕಾಂಗ್ರೆಸ್‌ನ ದೊಡ್ಡ ದೇಗುಲ ಸುತ್ತದೇ ಹೋದರೆ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದರು. 

ನವೆಂಬರ್‌ ಕ್ರಾಂತಿಯ ಬಗ್ಗೆ ನಾನು ನೀಡಿದ ಹೇಳಿಕೆಯನ್ನು ಕಾಂಗ್ರೆಸ್‌ ಅಲ್ಲಗಳೆದಿತ್ತು. ಸಿದ್ದರಾಮಯ್ಯ ಅವರ ರಾಜಕೀಯ ಸಂಧ್ಯಾಕಾಲದ ಬಗ್ಗೆ ಪುತ್ರರೂ ಆಗಿರುವ ವಿಧಾನಪರಿಷತ್‌ ಸದಸ್ಯ ಯತೀಂದ್ರ ಬಹಿರಂಗ ಹೇಳಿಕೆ ನೀಡಿದ್ದಾರೆ. ಇದೀಗ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಡಿ.ಕೆ.ಶಿವಕುಮಾರ್‌ ಅವರಿಗೆ ಪಂಗನಾಮ ಹಾಕಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದರು.

ಎಲ್ಲ ವಿಚಾರದಲ್ಲೂ ಎಡವಿರುವ ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಇದೀಗ ಖಾಲಿ ಡಬ್ಬದಂತೆ ಸದ್ದು ಮಾಡುತ್ತಿದೆ. ನೌಕರರಿಗೆ ವೇತನ ನೀಡಲು ಕೂಡ ಸರ್ಕಾರದ ಬಳಿ ಹಣವಿಲ್ಲ. ಅಭಿವೃದ್ಧಿ ಸಂಪೂರ್ಣ ಗೌಣವಾಗಿದೆ. ಈ ವಿಚಾರವನ್ನು ಮರೆಮಾಚಲು ಪ್ರಿಯಾಂಕ್‌ ಖರ್ಗೆ ಅವರನ್ನು ಮುಂದೆ ಬಿಟ್ಟು ಆರ್‌ಎಸ್‌ಎಸ್‌ ನಿರ್ಬಂಧದ ಕುರಿತು ಹೇಳಿಕೆ ಕೊಡಿಸಲಾಗಿದೆ ಎಂದು ಆರೋಪಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ