ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟಿ, ಬಿಜೆಪಿ ನಾಯಕಿ ಶ್ರುತಿ ಕೃಷ್ಣ ವಿರುದ್ಧ ಕಾಂಗ್ರೆಸ್ ಮಹಿಳಾ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ.
ಬಿಜೆಪಿ ಸಮಾವೇಶವೊಂದರಲ್ಲಿ ಶ್ರುತಿ ಮಾಡಿದ ಭಾಷಣ ಮಹಿಳೆಯರನ್ನು ಅವಮಾನಿಸುವ ರೀತಿಯಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಮಹಿಳಾ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ. ಈ ಬಗ್ಗೆ ಇಂದು ಸಂಜೆ 4.15 ಕ್ಕೆ ಕಾಂಗ್ರೆಸ್ ನಿಯೋಗ ಕಾವೇರಿ ಭವನದಲ್ಲಿರುವ ಮಹಿಳಾ ಆಯೋಗದ ಕಚೇರಿಗೆ ಭೇಟಿ ನೀಡಲಿದೆ.
ನಟಿ ಶ್ರುತಿ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವಾಗ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎನ್ನುವುದು ಅವರ ಮೇಲಿನ ಆರೋಪವಾಗಿದೆ. ಕಾಂಗ್ರೆಸ್ ಸರ್ಕಾರ ಬಸ್ ಟಿಕೆಟ್ ಫ್ರೀ ಮಾಡಿದ ಮೇಲೆ ಮಹಿಳೆಯರು ಎಲ್ಲೆಲ್ಲೋ ತಿರುಗಾಡುತ್ತಿದ್ದಾರೆ. ಮನೆಯಲ್ಲಿ ಗಂಡ, ಮಕ್ಕಳು ಅಳುತ್ತಿದ್ದಾರೆ ಎಂದು ಶ್ರುತಿ ಹೇಳಿದ್ದರು. ಅವರ ಈ ಹೇಳಿಕೆ ವೈರಲ್ ಆಗಿತ್ತು.
ಇದರ ಬಗ್ಗೆ ಇದೀಗ ಕಾಂಗ್ರೆಸ್ ಸಾಕ್ಷಿ ಸಮೇತ ಮಹಿಳಾ ಆಯೋಗಕ್ಕೆ ದೂರು ನೀಡುತ್ತಿದೆ. ಶ್ರುತಿ ನೀಡಿರುವ ಹೇಳಿಕೆ ಕೇವಲ ಕಾಂಗ್ರೆಸ್ ನ ಯೋಜನೆ ಟೀಕಿಸಿರುವುದು ಮಾತ್ರವಲ್ಲ, ಇದು ಇಡೀ ಮಹಿಳಾ ಸಮುದಾಯಕ್ಕೇ ಮಾಡಿದ ಅವಮಾನ ಎಂದು ಕಾಂಗ್ರೆಸ್ ಆಕ್ಷೇಪಿಸಿದೆ. ಈ ಬಗ್ಗೆ ಶ್ರುತಿ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಪರ-ವಿರೋಧ ಕಾಮೆಂಟ್ ಗಳು ಬಂದಿದ್ದವು.