ಬೆಂಗಳೂರು: ಪಾರ್ಕ್, ಮೈದಾನಗಳಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣದ ಸರ್ವೆ ವರದಿ ಸಲ್ಲಿಸದ ಬಿಡಿಎ, ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ ಒಂದಿಬ್ಬರನ್ನು ಜೈಲಿಗೆ ಕಳುಹಿಸಿದರೆ ಪರಿಸ್ಥಿತಿ ಸುಧಾರಿಸಲಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.
ಕಾನೂನು ಸೇವೆಗಳ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತೆ ಅವರ ವಿಭಾಗೀಯ ಪೀಠ ಕೋರ್ಟ್ ಆದೇಶವನ್ನು ಸಂಸ್ಥೆಗಳು ಲಘುವಾಗಿ ಪರಿಗಣಿಸುತ್ತಿವೆ. ಒಂದಿಬ್ಬರನ್ನು ಜೈಲಿಗೆ ಕಳುಹಿಸಿದರೆ ಎಲ್ಲವೂ ಸರಿಹೋಗುತ್ತದೆ. ನ್ಯಾಯಾಲಯ ಘನತೆಯ ವಿಷಯದಲ್ಲಿ ರಾಜಿಯಾಗುವುದಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತರನ್ನು ಜೈಲಿಗೆ ಕಳುಹಿಸಬೇಕಾದೀತು ಎಚ್ಚರ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಪಾರ್ಕ್, ಮೈದಾನಗಳಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದೊಡ್ಡವರ ವಿರುದ್ಧ ಕ್ರಮ ಕೈಗೊಳ್ಳಲು ನೀವು ಹಿಂಜರಿಯಬಹುದು. ಆದರೆ, ನಾವು ಹಿಂಜರಿಯುವುದಿಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಅಧಿಕಾರಿಗಳಿಗೆ ತೊಂದರೆ ಖಚಿತ ಎಂಬ ಎಚ್ಚರಿಕೆಯನ್ನು ನ್ಯಾಯಪೀಠ ನೀಡಿದೆ.
ಮೈದಾನಗಳಲ್ಲಿ ಅಕ್ರಮ ಕಟ್ಟಡಗಳ ಸರ್ವೆ ಸಂಬಂಧ ವರದಿ ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಬೇಕೆಂದು ಬಿಬಿಎಂಪಿ ಪರಿಪರಿಯಾಗಿ ಮನವಿ ಮಾಡಿಕೊಂಡಿತು. ಸರ್ವೆ ವರದಿ ಸಲ್ಲಿಕೆಗೆ ಕೊನೆ ಅವಕಾಶ ನೀಡುತ್ತಿದ್ದೇವೆ ಎಂದು ಹೇಳಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.