ಬೆಂಗಳೂರು : ರಾಜ್ಯದಲ್ಲಿನ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿಸುವ ಯೊಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಪೆರೇಸಂದ್ರ ಗ್ರಾಮದಲ್ಲಿ ಬುಧವಾರ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಅವರು ಶಿಲಾನ್ಯಾಸ ಮಾಡುವ ಮೂಲಕ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
25 ಸಾವಿರ ಚದರ ಅಡಿಯಲ್ಲಿ ತಲಾ ಸುಮಾರು 9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆಯು ಗುಣಮಟ್ಟದ ಆರೋಗ್ಯ ಸೌಲಭ್ಯ ದೊರಕಲಿದ್ದು, ಈಗಿರುವ 6 ಹಾಸಿಗೆಗಳ ಬದಲಾಗಿ 12 ಹಾಸಿಗೆಗಳ ವ್ಯವಸ್ಥೆ ಇರಲಿದೆ. ಒಬ್ಬ ವೈದ್ಯರ ಬದಲಾಗಗಿ ಮೂವರು ವೈದ್ಯರು ಇರುತ್ತಾರೆ.