ಕೊರೊನಾ ಶಂಕಿತರ ಕೈಗೆ ಬೀಳುತ್ತಿದೆ ಪಕ್ಕಾ ಸೀಲ್

ಗುರುವಾರ, 19 ಮಾರ್ಚ್ 2020 (18:49 IST)
ಕೊರೊನಾ ಶಂಕಿತರ ಪತ್ತೆಗೆ ಸರಕಾರ ಹೊಸ ಮಾರ್ಗ ಕಂಡುಕೊಂಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ತಾಲೂಕಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ವಿದೇಶದಿಂದ ಆಗಮಿಸುವ ಕೊರೊನಾ ಶಂಕಿತ ಸಿ-ವರ್ಗದ ಪ್ರಯಾಣಿಕರಿಗೆ ಕಡ್ಡಾಯ ಸ್ಕ್ರೀನಿಂಗ್ ಮತ್ತು ಸ್ಟಾಂಪಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

ಸ್ಕ್ರೀನಿಂಗ್ ಮತ್ತು ಸ್ಟಾಂಪಿಂಗ್ ವ್ಯವಸ್ಥೆ ಯನ್ನು ಸಿ-ವರ್ಗದಲ್ಲಿ ವಿಂಗಡಿಸಿರುವ ವಿದೇಶದಿಂದ ಸ್ವದೇಶಕ್ಕೆ ಬಂದ ಕೊರೊನಾ ಶಂಕಿತರಿಗೆ ಸ್ಟಾಂಪಿಂಗ್ ಮಾಡಿರುವುದರಿಂದ ಸಿ-ವರ್ಗದ ಪ್ರಯಾಣಿಕರು ಇಂದಿನಿಂದ ಏಪ್ರಿಲ್ 03 ರ ವರೆಗೆ ಮನೆಯಲ್ಲಿಯೇ ಪ್ರತ್ಯೇಕ ಚಿಕಿತ್ಸೆ ಪಡೆಯುವಂತೆ ಆಗಬೇಕು. ರಾತ್ರಿಯಿಂದ ಬಂದ 226 ಸಿ-ವರ್ಗದ ಪ್ರಯಾಣಿಕರಿಗೆ ದಿನಾಂಕ ಸಮೇತ ಬಲಗೈಗೆ ಸ್ಟಾಂಪಿಂಗ್ ಹಾಕಿ ಮನೆಗೆ ಕಳುಹಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾರ್ಚ್ 13 ರಿಂದ ಇಲ್ಲಿಯವರೆಗೆ ವಿದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 744 ಪ್ರಯಾಣಿಕರನ್ನು ತಪಾಸಣೆ ನಡೆಸಲಾಗಿದೆ. 744 ಪ್ರಯಾಣಿಕರಲ್ಲಿ ಎ-ವರ್ಗದಲ್ಲಿ 11, ಬಿ-ವರ್ಗದಲ್ಲಿ 28 ಇದ್ದು ಅದರಲ್ಲಿ ಸಿ-ವರ್ಗದ 704 ಪ್ರಯಾಣಿಕರ ಸಂಪೂರ್ಣ ಮಾಹಿತಿ ಪಡೆದು ಅವರ ವಾಸಸ್ಥಳಗಳಿಗೆ ಕಳುಹಿಸಲಾಗಿದೆ. ಅವರ ಆರೋಗ್ಯದಲ್ಲಿ ಏರು ಪೇರು ಕಂಡು ಬಂದಲ್ಲಿ ಚಿಕಿತ್ಸೆ ಬರುವಂತೆ ಸೂಚಿಸಲಾಗಿದೆ. ಬಿ-ವರ್ಗದಲ್ಲಿ 17 ಪ್ರಯಾಣಿಕರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈವರೆಗೂ ಸೋಂಕಿತರು ಪತ್ತೆ ಆಗಿಲ್ಲ ಎಂದು ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ