ಕಾನ್ಸಟೇಬಲ್ ವೊಬ್ಬರಲ್ಲಿ ಕೊರೊನಾ ಶಂಕೆ : ಪ್ರತಿಭಟನೆಗೆ ಮುಂದಾದ ಪೊಲೀಸರ ಕುಟುಂಬದವರು

ಬುಧವಾರ, 15 ಏಪ್ರಿಲ್ 2020 (16:04 IST)
ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್‌ಆರ್‌ಪಿ) ಕಾನ್‌ಸ್ಟೆಬಲ್‌ವೊಬ್ಬರಿಗೆ ಕೊರೊನಾ ಸೋಂಕು ಶಂಕಿತ ಲಕ್ಷಣಗಳು ಕಂಡು ಬಂದಿದ್ದು, ಅವರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಬಳ್ಳಾರಿಯಿಂದ ಹಾವೇರಿ ಜಿಲ್ಲೆಗೆ ಕೋವಿಡ್‌–19 ಕರ್ತವ್ಯದ ಮೇಲೆ ಬಂದಿದ್ದ ಕಾನ್‌ಸ್ಟೆಬಲ್‌ ಇವರಾಗಿದ್ದಾರೆ. 

ಲಾಕ್‌ಡೌನ್‌ ಬಂದೋಬಸ್ತ್‌ಗಾಗಿ ಕೆಎಸ್‌ಆರ್‌ಪಿ ತುಕಡಿಗೆ ಸೇರಿದ 25 ಮಂದಿ ಜಿಲ್ಲೆಗೆ ಬಂದಿದ್ದರು. ಕಾನ್‌ಸ್ಟೆಬಲ್‌ವೊಬ್ಬರಿಗೆ  ಕೆಮ್ಮು, ಜ್ವರ, ನೆಗಡಿ ಲಕ್ಷಣಗಳು ಕಾಣಿಸಿಕೊಂಡವು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ತುಕಡಿಯಲ್ಲಿದ್ದ ಎಲ್ಲರನ್ನೂ ಆರೋಗ್ಯ ತಪಾಸಣೆ ಮಾಡಿ, ಕೆರೆಮತ್ತಿಹಳ್ಳಿಯಲ್ಲಿರುವ ಹಳೆಯ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಕ್ವಾರಂಟೈನ್‌ ಮಾಡಲಾಗಿದೆ.
ಸ್ಥಳೀಯರ ವಿರೋಧ: 24 ಕಾನ್‌ಸ್ಟೆಬಲ್‌ಗಳನ್ನು ಕ್ವಾರಂಟೈನ್‌ ಮಾಡಿರುವುದಕ್ಕೆ ಹಳೆಯ ಎಸ್ಪಿ ಕಚೇರಿ ಸಮೀಪವಿರುವ ಪೊಲೀಸ್‌ ಸಿಬ್ಬಂದಿ ವಸತಿಗೃಹದ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ವಿವಿಧ ವಯೋಮಾನದವರು ಇಲ್ಲಿ ವಾಸಿಸುತ್ತಿರುವುದರಿಂದ ಕೊರೊನಾ ಸೋಂಕು ಶಂಕಿತ ವ್ಯಕ್ತಿಗಳಿಗೆ ಇಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿರುವುದು ನಮಗೆಲ್ಲ ಆತಂಕ ತಂದಿದೆ ಎಂದು ಪ್ರತಿಭಟನೆಗೆ ಮುಂದಾದರು. ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಇವರು ಯಾರೂ ಕೋವಿಡ್‌–19 ರೋಗಿಗಳಲ್ಲ ಎಂದು ಸ್ಥಳೀಯ ನಿವಾಸಿಗಳಿಗೆ ಮನವರಿಕೆ ಮಾಡಿಕೊಟ್ಟರು. ಇದರಿಂದ ಸ್ಥಳೀಯರು ಪ್ರತಿಭಟನೆ ಕೈಬಿಟ್ಟರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ