ಅಗಲಿದ ಜೀವಗಳಿಗೆ ಬೆಲೆ ಕಟ್ಟಲಾಗದು-ತಲಾ ಲಕ್ಷ ರೂ ಪರಿಹಾರದ ಚೆಕ್ ವಿತರಣೆ

ಗುರುವಾರ, 24 ಮಾರ್ಚ್ 2022 (21:41 IST)
ಕೋವಿಡ್ ನಿಂದ ನಮ್ಮನ್ನು ಅಗಲಿದ ಜೀವಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
 
ನಾಗಪುರದಲ್ಲಿರುವ ಶಾಸಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೋವಿಡ್ ನಿಂದ ಮೃತರಾದವರ ಕಾನೂನು ಬದ್ಧ ವಾರಸುದಾರ 93 ಕುಟುಂಬಗಳಿಗೆ ರಾಜ್ಯ ಸರ್ಕಾರದ ಒಂದು ಲಕ್ಷ ರೂ ಪರಿಹಾರದ ಚೆಕ್ ಗಳನ್ನು ವಿತರಿಸಿ ಅವರು ಮಾತನಾಡಿದರು.
 
ನನ್ನೊಂದಿಗೆ ಕೋವಿಡ್ ಹತೋಟಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಆ ಸಂದರ್ಭದಲ್ಲಿ ಅಸುನೀಗಿದರು. ಈ ರೀತಿಯಲ್ಲಿ ಆತ್ಮೀಯರು, ಬಂಧುಗಳು, ದುಡಿಯುವ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳ ನೋವನ್ನು ಮರೆಯಲು ಸಾಧ್ಯವಿಲ್ಲ ಎಂದ ಸಚಿವರು‌ ಕೆಲ ಕಾಲ ಭಾವುಕರಾದರು.
 
ನಮ್ಮನ್ನು ಅಗಲಿದ ಜೀವಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೂ ನರೇಂದ್ರ ಮೋದಿ ನೇತ್ರತ್ವದ ನಮ್ಮ‌ಕೇಂದ್ರ ಸರ್ಕಾರ 50 ಸಾವಿರ ರೂ ಮತ್ತು ಯಡಿಯೂರಪ್ಪ ಅವರ‌ ಅವಧಿಯ ನಮ್ಮ ರಾಜ್ಯ ಸರ್ಕಾರದಿಂದ 1 ಲಕ್ಷ ರೂ ಒಟ್ಟಾರೆ 1.50 ಲಕ್ಷ ರೂ ಪರಿಹಾರ ನೀಡುವ ಯೋಜನೆ ಜಾರಿಗೆ ತಂದಿತು. ಈ ಯೋಜನೆಯನ್ನು ಇಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡ ಮುಂದುವರಿಸಿದ್ದಾರೆ. ಈ ಮೂಲಕ ನೊಂದವರ ಕಣ್ಣೀರು ಒರೆಸುವ ಸಣ್ಣ ಪ್ರಯತ್ನವನ್ನು ನಮ್ಮ ಸರ್ಕಾರಗಳು ಮಾಡುತ್ತಿವೆ ಎಂದರು.
 
ಕೋವಿಡ್ ಸಮಯದಲ್ಲಿ ಸೋಂಕಿತರಿಗೆ ಸೂಕ್ತವಾದ ಔಷಧಿ ಮತ್ತು ಇತರೆ ವೈದ್ಯಕೀಯ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಏರ್ಪಾಡು ಮಾಡಲಾಗಿತ್ತು,ಪ್ರತಿ ಮನೆಗೆ ಔಷಧಿ,ಫುಡ್ ಕಿಟ್, ಅಗತ್ಯ ಇರುವವರಿಗೆ ಆಕ್ಸಿಜನ್ ಹೀಗೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿತ್ತು.ಆಗಸ್ಟ್ ವೇಳೆಗೆ ಮತ್ತೊಂದು ಅಲೆ ಬರುವ ಸಾಧ್ಯತೆ ಇರುವ ಬಗ್ಗೆ ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದು , ಎಲ್ಲರೂ ಜಾಗೃತರಾಗಿರಬೇಕು ಎಂದು ಸಚಿವರು ತಿಳಿಸಿದರು.
 
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಉಪ ಮೇಯರ್ ಎಸ್.ಹರೀಶ್, ಜಯರಾಮಯ್ಯ, ಜಯಸಿಂಹ,  ಶ್ರೀನಿವಾಸ್, ವೆಂಕಟೇಶ್, ವೆಂಕಟೇಶ್,  ಮೂರ್ತಿ,ಮಂಜುನಾಥ್, ಡಾ.ಮನೋರಂಜನ್ ಹೆಗಡೆ, ಡಾ.ಮಂಜುಳಾ ಇತರರು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ