ಬೆಂಗಳೂರು : ಕಳೆದ 75 ವರ್ಷಗಳಲ್ಲಿ ಭಾರತವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷವೇ ಹೊರತು 9 ವರ್ಷಗಳಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭಾರೀ ಗೆಲುವಿಗೆ ಶ್ರಮಿಸಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪಕ್ಷದ ಪ್ರಚಾರ ಸಮಿತಿಗಳ ಪದಾಧಿಕಾರಿಗಳಿಗೆ ಭಾನುವಾರ ಪಕ್ಷದ ವತಿಯಿಂದ ಇಲ್ಲಿನ ಭಾರತ್ ಜೋಡೊ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಮುಂಬರುವ ಲೋಕಸಭಾ ಚುನಾವಣೆಗೆ ಪ್ರಚಾರ ಸಮಿತಿಯ ಪೂರ್ವ ತಯಾರಿ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಉದಾತ್ತ ಇತಿಹಾಸ ಕಾಂಗ್ರೆಸ್ಗಿದೆ. ಇದಾದ ಮೇಲೆ ದೇಶದ ಚುಕ್ಕಾಣಿ ಹಿಡಿದ ಜವಾಹರ್ ಲಾಲ್ ನೆಹರು ಸೇರಿದಂತೆ ಅನೇಕರು ಅರ್ಥಪೂರ್ಣ ಕೆಲಸಗಳನ್ನು ಮಾಡುವ ಮೂಲಕ ಭಾರತವನ್ನು ದೈತ್ಯ ಆರ್ಥಿಕ ಶಕ್ತಿಯಾಗಿ ಬೆಳೆಸಿದರು. ಇದನ್ನು ಮೋದಿ ಸೇರಿದಂತೆ ಬಿಜೆಪಿ ನಾಯಕರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದರು.
ದೇಶದಲ್ಲಿರುವ ಅಣೆಕಟ್ಟುಗಳಲ್ಲಿ 95% ರಷ್ಟು ನಿರ್ಮಾಣವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ. ಹಾಗೆಯೇ ಐಐಎಂ, ಐಐಟಿ, ಏಮ್ಸ್, ಕ್ಷೀರಕ್ರಾಂತಿ, ಕೃಷಿ ಕ್ರಾಂತಿ, ಡಿಜಿಟಲ್ ಕ್ರಾಂತಿ ಇವೆಲ್ಲವನ್ನು ಮಾಡಿದ್ದು ನಮ್ಮ ಪಕ್ಷವೇ ಹೊರತು ಕೋಮುವಾದಿ ರಾಜಕಾರಣ ಮಾಡುತ್ತಿರುವ ಮೋದಿಯಲ್ಲ. ಅವರೇನಿದ್ದರೂ ಚೆನ್ನಾಗಿ ಭಾಷಣ ಮಾಡಬಲ್ಲರು ಅಷ್ಟೇ ಎಂದು ವ್ಯಂಗ್ಯವಾಡಿದರು.