ಜು.20ರಿಂದ ದೇಶವ್ಯಾಪಿ ಲಾರಿ ಮುಷ್ಕರ
ಬುಧವಾರ, 18 ಜುಲೈ 2018 (16:14 IST)
ಕೇಂದ್ರ ಸರ್ಕಾರಕ್ಕೆ ಸರಕು ಸಾಗಣೆ ಉದ್ಯಮದಲ್ಲಿ ಸುಮಾರು ದಿನಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸತತವಾಗಿ ಮನವಿ ಮಾಡಲಾಗಿದ್ದರೂ ಸಹ ಇದುವರೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವ ಹಿನ್ನೆಲೆಯಲ್ಲಿ ಜು.20ರಿಂದ ದೇಶವ್ಯಾಪಿ ಅನಿರ್ಧಿಷ್ಟಾವಧಿ ಕಾಲ ಸರಕು ಸಾಗಣೆದಾರರು ಲಾರಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಹೀಗಂತ ಹುಬ್ಬಳ್ಳಿ-ಧಾರವಾಡ ಗೂಡ್ಸ್ ಟ್ರಾನ್ಸಪೋರ್ಟರ್ಸ್ ರ್ಸ್ ಆ್ಯಂಡ್ ಲಾರಿ ಓನರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಸೈಯದ್ ಸೈಪುಲ್ಲಾ ಖಾನ ತಿಳಿಸಿದ್ದಾರೆ.
ರಸ್ತೆ ಸಾರಿಗೆ ಉದ್ಯಮ ಸಾಮಾನ್ಯ ಜನರಿಗೆ ಅವಶ್ಯಕ ವಸ್ತುಗಳನ್ನು ಸರಬರಾಜು ಮಾಡುತ್ತಿರುವುದಲ್ಲದೇ ದೇಶದ ಆರ್ಥಿಕ ಬೆನ್ನೆಲುಬಾಗಿ ಶ್ರಮಿಸುತ್ತಿದೆ. ಅಲ್ಲದೇ ಉದ್ಯೋಗ ಸೃಷ್ಟಿಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದೆ. ಹೀಗಿರುವಾಗ ರಸ್ತೆ ಸಾರಿಗೆ ಉದ್ಯಮವು ನೋಟು ರದ್ಧತಿ, ಸರಕು ಸೇವಾ ಕಾಯ್ದೆ ಜಾರಿ ಹಾಗೂ ಇ-ವೇ ಬಿಲ್ ವ್ಯವಸ್ಥೆ ಜಾರಿಗೊಳಿಸಿದಾಗಲೂ ಕೆಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿದೆ. ಆದರೇ ಅವುಗಳಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವಲ್ಲಿ ಇಂದಿಗೂ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ.
ಈ ನಿಟ್ಟಿನಲ್ಲಿ ಮುಷ್ಕರ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಇಂಧನ ದರ ಇಳಿಕೆ, ರಾಷ್ಟ್ರವ್ಯಾಪಿ ಏಕರೂಪ ದರ ನಿಗದಿ, ತ್ರೈಮಾಸಿಕ ಪರಿಶೀಲನಾ ಪದ್ಧತಿ ಆಗ್ರಹಿಸಿ, ಟಿ.ಡಿ.ಎಸ್ ರದ್ದುಗೊಳಿಸುವುದು, ಪೂರ್ವಭಾವಿ ಆದಾಯ ಕಾಯ್ದೆ ಪರಿವರ್ತಿಸಲು ಆಗ್ರಹಿಸಿ ಹಾಗೂ ಇನ್ನು ಹಲವಾರು ಬೇಡಿಕೆ ಇಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದೆಂದು ಲಾರಿ ಮಾಲಿಕರು ಮತ್ತು ಚಾಲಕರ ಸಂಘ ದವರು ತಿಳಿಸಿದ್ದಾರೆ.