ಬೆಂಗಳೂರು: ಹಿಂದೂ ಎಂಬ ಪದದ ಅರ್ಥವೇ ಅಶ್ಲೀಲವಾಗಿದೆ ಎಂದಿದ್ದ ಕಾಂಗ್ರೆಸ್ ನಾಯಕ, ಸಚಿವ ಸತೀಶ್ ಜಾರಕಿಹೊಳಿಗೆ ಈಗ ಸಂಕಷ್ಟ ಎದುರಾಗಿದ್ದು ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಬೆಂಗಳೂರಿನ 42 ನೇ ಎಸಿಎಂಎಂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಈ ಬಗ್ಗೆ 2022 ರಲ್ಲಿ ವಕೀಲ ದಿಲೀಪ ಎಂಬವರು ದೂರು ನೀಡಿದ್ದರು. ಸತೀಶ್ ತಮ್ಮ ಹೇಳಿಕೆಯಿಂದ ಹಿಂದೂ ಧರ್ಮಕ್ಕೆ ನಿಂದನೆ ಮಾಡಿದ್ದಲ್ಲದೆ, ಅಶಾಂತಿ ಮೂಡಿಸಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
2022 ರಲ್ಲಿ ಈ ಘಟನೆ ನಡೆದಿತ್ತು. ಬೆಳಗಾವಿಯಲ್ಲಿ ನಡೆದಿದ್ದ ಮಾನವ ಬಂಧುತ್ವ ಕಾರ್ಯಕ್ರಮದಲ್ಲಿ ಮಾತನಾಡುವಾಗ ಸತೀಶ್ ಜಾರಕಿಹೊಳಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಿಂದೂ ಎಂಬ ಪದ ಎಲ್ಲಿಂದ ಬಂತು? ಇದು ನಮ್ಮದಲ್ಲ, ಪರ್ಷಿಯನ್ ಭಾಷೆಯಿಂದ ಬಂದಿದ್ದು. ಭಾರತಕ್ಕೂ ಪರ್ಷಿಯಕ್ಕೂ ಏನು ಸಂಬಂಧ? ಹಿಂದೂ ಭಾರತೀಯ ಪದವೇ ಅಲ್ಲ. ಹಿಂದೂ ಪದ ನಮ್ಮದು ಹೇಗೆ ಆಯಿತು ಎಂದು ಚರ್ಚೆಯಾಗಬೇಕಿದೆ. ಇದನ್ನು ತಿಳಿದರೆ ನಿಮಗೆ ನಾಚಿಕೆಯಾಗಬಹುದು. ಹಿಂದೂ ಪದವೇ ಅಶ್ಲೀಲವಾಗಿದೆ. ಎಲ್ಲಿಂದಲೋ ಬಂದ ಧರ್ಮವನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಸತೀಶ್ ಭಾಷಣದಲ್ಲಿ ಹೇಳಿದ್ದರು.
ಆ ಸಂದರ್ಭದಲ್ಲಿ ಸತೀಶ್ ಹೇಳಿಕೆಗೆ ಹಿಂದೂಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಸ್ವತಃ ಕಾಂಗ್ರೆಸ್ ನಾಯಕರೇ ಸತೀಶ್ ಹೇಳಿಕೆಯನ್ನು ಖಂಡಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಿರುವ ನ್ಯಾಯಾಲಯ ಆಗಸ್ಟ್ 27 ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.