ಬೆಂಗಳೂರು: ಸತತ ಮಳೆಯಿಂದ ಕಂಗೆಟ್ಟಿದ್ದ ಕರಾವಳಿಗರಿಗೆ ಎರಡು ದಿನ ವರುಣ ಬ್ರೇಕ್ ನೀಡಿದ್ದ. ಆದರೆ ಈಗ ಮತ್ತೆ ಈ ದಿನದಿಂದ ಮಳೆ ಅಬ್ಬರ ಶುರುವಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ಕರ್ನಾಟಕದ ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ.
ಕರಾವಳಿಯಲ್ಲಿ ಎರಡು ದಿನ ಮಳೆ ಕೊಂಚ ಕಡಿಮೆಯಾಗಿದ್ದರಿಂದ ಜನ ನಿಟ್ಟುಸಿರು ಬಿಡುವಂತಾಗಿತ್ತು. ಶಾಲಾ-ಕಾಲೇಜುಗಳೂ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ ಇಂದಿನಿಂದ ಮತ್ತೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿವೆ.
ಕರಾವಳಿಯಲ್ಲಿ ಮಳೆ ಕಡಿಮೆಯಾಗುತ್ತಿದ್ದಂತೇ ಬೆಂಗಳೂರಿನಲ್ಲಿ ಕಳೆದ ಎರಡು-ಮೂರು ದಿನ ಉತ್ತಮ ಮಳೆಯಾಗುತ್ತಿತ್ತು. ಆದರೆ ಇಂದಿನಿಂದ ಮತ್ತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮತ್ತೆ ಮಳೆ ಅಬ್ಬರವಿರಲಿದ್ದು ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಮಾತ್ರವಲ್ಲದೆ, ಬಾಗಲಕೋಟೆ, ಗದಗ, ಹಾವೇರಿ, ಯಾದಗಿರಿ, ಕೊಪ್ಪಳ, ರಾಯಚೂರು, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲೂ ಇಂದು ಉತ್ತಮ ಮಳೆಯಾಗಲಿದೆ. ಬೆಂಗಳೂರಿನಲ್ಲೂ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಇಂದೂ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿಯಷ್ಟಿದೆ.