ಬೆಂಗಳೂರು ಮೂಲದ ಮತ್ತೊಬ್ಬ ವ್ಯಕ್ತಿಯಲ್ಲಿಯೂ ಕೋವಿಡ್ ರೂಪಾಂತರಿ ತಳಿ ಓಮಿಕ್ರೋನ್ ಪತ್ತೆ

ಗುರುವಾರ, 2 ಡಿಸೆಂಬರ್ 2021 (21:34 IST)
bbmp
ಬೆಂಗಳೂರು ವಿಮಾನ ನಿಲ್ದಾಣಕ್ಕೆ ದಕ್ಷಿಣ ಆಫ್ರಿಕಾದಿಂದ ಬಂದಿಳಿದ ಒಬ್ಬರು ಪ್ರಯಾಣಿಕರಲ್ಲಿ ಹಾಗೂ ಟ್ರಾವೆಲ್ ಹಿಸ್ಟರಿ ಇಲ್ಲದ ಬೆಂಗಳೂರು ಮೂಲದ ಮತ್ತೊಬ್ಬ ವ್ಯಕ್ತಿಯಲ್ಲಿಯೂ ಕೋವಿಡ್ ರೂಪಾಂತರಿ ತಳಿ ಓಮಿಕ್ರೋನ್ ಪತ್ತೆಯಾದ ಹಿನ್ನೆಲೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
 
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾಒಮಿಕ್ರೋನ್ ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಕೂಡಾ ಪರೀಕ್ಷೆಗೊಳಪಡಿಸಿದ್ದು ಮತ್ತೆ ಐವರಿಗೆ ಕೋವಿಡ್​ ಪಾಸಿಟಿವ್ ವರದಿ ಬಂದಿದೆ. ಎಲ್ಲರ ಸ್ಯಾಂಪಲ್​ಗಳನ್ನು ಜೀನೋಮ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
 
ಕೋವಿಡ್ ಪಾಸಿಟಿವ್ ವಿವರ
ದಕ್ಷಿಣ ಆಫ್ರಿಕಾದ ಪ್ರಯಾಣದಿಂದ ಬಂದ 66 ವರ್ಷದ ವ್ಯಕ್ತಿಗೆ ಒಮಿಕ್ರೋನ್ ತಗುಲಿರುವುದು ದೃಢಪಟ್ಟಿದೆ. ವಿಮಾನ ನಿಲ್ದಾಣದಲ್ಲಿ ನವೆಂಬರ್ 20 ರಂದು ಪರೀಕ್ಷೆ ನಡೆಸಲಾಗಿತ್ತು. ಈ ವ್ಯಕ್ತಿಯ 24 ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷಿಸಿದಾಗ ನೆಗೆಟಿವ್ ವರದಿ ಬಂದಿದೆ. 240 ದ್ವಿತೀಯ ಸಂಪರ್ಕಿತರ ರಿಪೋರ್ಟ್ ಕೂಡಾ ನೆಗೆಟಿವ್ ಬಂದಿದೆ.ಇನ್ನು ಬೆಂಗಳೂರಿನ 46 ವರ್ಷದ ವ್ಯಕ್ತಿಗೆ ಪಾಸಿಟಿವ್ ಬಂದಿದ್ದು, ಜ್ವರ ಹಾಗೂ ಮೈಕೈ ನೋವಿನಿಂದ ಬಳಲುತ್ತಿದ್ದರು. ಇವರಿಗೆ 13 ಪ್ರಾಥಮಿಕ ಸಂಪರ್ಕಿತರಿದ್ದು, ಈ ಪೈಕಿ ಮೂವರಿಗೆ ಪಾಸಿಟಿವ್ ಬಂದಿದೆ. ಇನ್ನು 205 ದ್ವಿತೀಯ ಸಂಪರ್ಕಿತರಿದ್ದು ಇಬ್ಬರಿಗೆ ಪಾಸಿಟಿವ್ ಬಂದಿದೆ. ಎಲ್ಲರನ್ನೂ ಐಸೋಲೇಷನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
 
ಮೊದಲ ಪ್ರಕರಣ:
ಮೊದಲ ಪ್ರಕರಣದ 66 ವರ್ಷದ ವ್ಯಕ್ತಿ ಸೌತ್ ಆಫ್ರಿಕಾ ಮೂಲದವರಾಗಿದ್ದು, ನೆಗೆಟಿವ್ ರಿಪೋರ್ಟ್ ನೊಂದಿಗೆ ಬೆಂಗಳೂರಿಗೆ ಬಂದಿಳಿದಿದ್ದರು. ಆದರೆ, ಹೋಟೆಲ್ ನಲ್ಲಿ ಉಳಿದುಕೊಳ್ಳುವ ಸಮಯದಲ್ಲಿ ಕೋವಿಡ್ ಪರೀಕ್ಷಿಸಿದಾಗ ಪಾಸಿಟಿವ್ ವರದಿ ದೃಢಪಟ್ಟಿದೆ. ನಂತರ ಪಾಲಿಕೆ ವೈದ್ಯರು ಭೇಟಿ ಮಾಡಿದಾಗ ಆ ವ್ಯಕ್ತಿಗೆ ಸೌಮ್ಯ ಗುಣಲಕ್ಷಣಗಳಿದ್ದು, ಹೋಟೆಲ್ ನಲ್ಲಿ ಸೆಲ್ಫ್ ಕ್ವಾರಂಟೈನ್ ಆಗುವಂತೆ ತಿಳಿಸಲಾಗಿತ್ತು. ನ.22 ರಂದು ಅವರ ಸ್ಯಾಂಪಲ್ ತೆಗೆದು ಜೀನೋಮ್ ಸೀಕ್ವೆನ್ಸ್ ಗೆ ಕಳುಹಿಸಲಾಗಿತ್ತು. ನವೆಂಬರ್ 23 ರಂದು ವ್ಯಕ್ತಿ ಖಾಸಗಿ ಲ್ಯಾಬ್ ನಲ್ಲಿ ಮತ್ತೆ ಕೋವಿಡ್ ಟೆಸ್ಟ್ ಮಾಡಿದಾಗ ನೆಗೆಟಿವ್ ರಿಪೋರ್ಟ್ ಬಂದಿದೆ. ನಂತರ ನವೆಂಬರ್ 27 ರಂದು ಮಧ್ಯರಾತ್ರಿ ಹೋಟೆಲ್ ನಿಂದ ಕ್ಯಾಬ್ ಬುಕ್ ಮಾಡಿ ಏರ್ ಪೋರ್ಟ್ ತೆರಳಿ ದುಬೈಗೆ ಮರಳಿದ್ದಾರೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.
 
ಎರಡನೇ ಕೇಸ್ ಬೆಂಗಳೂರು ಮೂಲದವರು:
 
ಟ್ರಾವೆಲ್ ಹಿಸ್ಟರಿ ಇಲ್ಲದೇ, ಎರಡನೇ ಪ್ರಕರಣದಲ್ಲಿ 46 ವರ್ಷದ ವ್ಯಕ್ತಿಗೂ ನ. 22 ರಂದು ಪಾಸಿಟಿವ್ ವರದಿ ಬಂದಿದೆ. ಆದರೆ, ಆತಂಕದ ವಿಚಾರ ಎಂದರೆ ಇವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೇ ರೂಪಾಂತರಿ ಒಮಿಕ್ರೋನ್​ ವಕ್ಕರಿಸಿದೆ. ಇದು ಬಾರಿ ಆತಂಕದ ವಿಚಾರ. ಹೀಗಾಗಿ ಇನ್ನೂ ಹೆಚ್ಚಿನ ಜನರಿಗೆ ಒಮಿಕ್ರೋನ್ ತಗುಲಿರುವ ಸಾಧ್ಯತೆ ಇದೆ. ಜನ ಎಚ್ಚರಿಕೆಯಿಂದ ಇರಬೇಕು ಎಂದು ಗೌರವ್ ಗುಪ್ತಾ ಹೇಳಿದ್ದಾರೆ.
 
ಚಿಕಿತ್ಸೆಗೆ ವ್ಯವಸ್ಥೆ:  ಬಿಬಿಎಂಪಿ ವ್ಯಾಪ್ತಿಯಲ್ಲಿ ಬೌರಿಂಗ್ ಆಸ್ಪತ್ರೆ ಓಮಿಕ್ರೋನ್ ಚಿಕಿತ್ಸೆಗೆ ಮೀಸಲಿಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ