ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪರಿಶೀಲನೆ

ಗುರುವಾರ, 2 ಡಿಸೆಂಬರ್ 2021 (21:16 IST)
ಬೈಯಪ್ಪನಹಳ್ಳಿಯಲ್ಲಿ ಹೊಸದಾಗಿ ರೈಲ್ವೆ ಟರ್ಮಿನಲ್ ಉದ್ಘಾಟನೆಗೆ ಸಿದ್ದವಾಗಿದ್ದು, ಟರ್ಮಿನಲ್‌ಗೆ ಸಂಪರ್ಕ ಕಲ್ಪಿಸುವ ಮೇಲುಸೇತುವೆ ಮತ್ತು ರಸ್ತೆಗಳಿಗೆ ಕೂಡಲೆ ಡಾಂಬರೀಕರಣ ಮಾಡಿ ಸುಗಮ ವಾಹನ ಸಂಚಾರದ ವ್ಯವಸ್ಥೆ ಮಾಡಲು ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಬೈಯಪ್ಪನಹಳ್ಳಿಯಲ್ಲಿ ಹೊಸದಾಗಿ ರೈಲ್ವೆ ಟರ್ಮಿನಲ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಂಬಂಧ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬೈಯ್ಯಪ್ಪನಹಳ್ಳಿ ರಸ್ತೆ(ಹಳ್ಳಿ ರಸ್ತೆ)ಗೆ ಡಾಂಬರೀಕರಣ ಮಾಡಬೇಕು. ಜೊತೆಗೆ ರೈಲ್ವೆ ಇಲಾಖೆ ಮತ್ತು ಪಾಲಿಕೆಯ ಸಹಬಾಗಿತ್ವದೊಂದಿಗೆ ರೈಲ್ವೆ ಹಳಿ ಬಳಿ 7.5 ಮೀಟರ್ ಅಗಲದ ಮೇಲುಸೇತುವೆ(Railway Over Bridge) ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಾಕಿಯಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಬೈಯಪ್ಪನಹಳ್ಳಿ ಟರ್ಮಿನಲ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲವೂ ಉತ್ತಮ‌ ರೀತಿಯಲ್ಲಿರಬೇಕು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ ನೀರುಗಾಲುವೆಯ ಡೈವರ್ಷನ್ ಕಾಮಗಾರಿ ಪ್ರಗತಿಯಲ್ಲಿದ್ದು, ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ರಸ್ತೆಗೆ ಡಾಂಬರೀಕರಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 
 
ಮಾರುತಿ ಸೇವಾನಗರ ವಾರ್ಡ್ ಮುಕುಂದ ಚಿತ್ರಮಂದಿರದ ಜಂಕ್ಷನ್ ನ ರಸ್ತೆ ಬದಿ ಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಕೂಡಲೆ ಆ ಕಾಮಗಾರಿಯನ್ನು ಮುಗಿಸಿ ರಸ್ತೆಯ ದುರಸ್ತಿ ಕಾಮಗಾರಿಯನ್ನು ಮಾಡಿ ಸುಗಮ ವಾಹನ ಸಂಚಾರಕ್ಕೆ ಅನುವಾಗುವಂತೆ ಮಾಡಬೇಕು. ಇದೇ ವೇಳೆ ರಸ್ತೆ ಬದಿ ಟ್ರಾನ್ಸ್ ಫಾರ್ಮ್ ಇರುವುದನ್ನು ಕಂಡು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ ಕೂಡಲೆ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಲು ಮುಖ್ಯ ಆಯುಕ್ತರು ಸೂಚನೆ ನೀಡಿದರು.
 
ಪರಿಶೀಲನೆ ವೇಳೆ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್, ರೈಲ್ವೆ ಇಲಾಖೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ