ಗೋವು ಕೇವಲ ಒಂದು ಪ್ರಾಣಿಯಲ್ಲ, ಅದು ಭಾರತದ ಪ್ರಾಣ, ಇಂದು ಆ ಪ್ರಾಣಕ್ಕೆ ಕುತ್ತು ಬಂದಿದ್ದು, ಅದರ ರಕ್ಷಣೆಯ ಉದ್ದೇಶದೊಂದಿಗೆ, ಗೋವಿಗಾಗಿ - ದೇಶಕ್ಕಾಗಿ ಪ್ರಾಣಾರ್ಪಣೆಯನ್ನು ಮಾಡಿದ ಸ್ವಾತಂತ್ರ ಸೇನಾನಿ ಮಂಗಲಪಾಂಡೆಯ ಸ್ಪೂರ್ತಿಯಲ್ಲಿ "ಮಂಗಲ ಗೋಯಾತ್ರೆ" ನಡೆಯಲಿದೆ. ನವೆಂಬರ್ 8ರಿಂದ ಆರಂಭವಾಗುವ ಮಂಗಲ ಗೋಯಾತ್ರೆ ಜನವರಿ 26 ವರೆಗೆ ದಕ್ಷಿಣಭಾರತದ ಏಳುರಾಜ್ಯಗಳಲ್ಲಿ ಸಂಚರಿಸಿ ಜನರಲ್ಲಿ ಗೋವಿನಕುರಿತಾದ ಭಾವಗಾಗರಣೆ ಮಾಡಲಿದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ಬಳ್ಳಾರಿಯ ವಿಠಲ ಕೃಷ್ಣ ದೇವಾಲಯದ ಪರಿಸರದಲ್ಲಿ ನಡೆದ ಮಂಗಲ ಗೋಯಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಭಾರತೀಯ ಗೋತಳಿಗಳು ಸರ್ವ ಶ್ರೇಷ್ಠವಾಗಿದ್ದು, ದೇಶೀ ತಳಿಯ ಹಾಲು, ಗೋಮೂತ್ರ, ಗೋಮಯ ಸೇರಿದಂತೆ ಎಲ್ಲವೂ ಉತ್ತಮ ಗುಣಗಳನ್ನು ಹೊಂದಿದೆ ಎಂದು ಅನೇಕ ಸಂಶೋಧನೆಗಳಿಂದ ದೃಡಪಟ್ಟಿದೆ. ಮಿಶ್ರತಳಿಯ ಹಸುಗಳು ಹೆಚ್ಚು ಹಾಲುಕೊಡುತ್ತದೆ ಎಂಬ ಭ್ರಮೆಯಲ್ಲಿ ದೇಶೀತಳಿಗಳನ್ನು ಮೂಲೆಗುಂಪಾಗಿಸಲಾಗಿದೆ. ಭಾರತೀಯ ತಳಿಗಳು ಇಂದು ಅಳಿವಿನಂಚಿನಲ್ಲಿದ್ದು ಇವುಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಯಾವುದೇ ಜಾತಿ- ಮತ - ರಾಜಕೀಯದ ಉದ್ದೇಶವಿಲ್ಲದೇ ಕೇವಲ ಗೋಸಂರಕ್ಷಣೆಗಾಗಿ ಯಾತ್ರೆಯನ್ನು ಆಯೋಜಿಸಲಾಗಿದ್ದು, ನಾಡಿನ ಜನತೆ ಗೋರಕ್ಷಣೆಯ ಈ ಮಹಾಭಿಯಾನದಲ್ಲಿ ಪಾಲ್ಗೊಂಡು ಗೋರಕ್ಷಣೆಗೆ ತಮ್ಮ ಸೇವೆ ಸಲ್ಲಿಸಲಿ ಎಂದು ಕರೆನೀಡಿದರು.
ಮಂಗಳ ಗೋಯಾತ್ರೆಯು ಸಂತರು - ಮಕ್ಕಳು - ರೈತರ ತ್ರಿವೇಣೀ ಸಂಗಮವಾಗಿದ್ದು, ವಿಶೇಷವಾಗಿ ಮಕ್ಕಳು ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ರೈತರಲ್ಲಿ ಹಾಗೂ ಮಕ್ಕಳಲ್ಲಿ ದೇಶೀ ಗೋವಿನಕುರಿತಾಗಿ ಅರಿವನ್ನು ಮೂಡಿಸಲಾಗುವುದು. ಮಂಗಲ ಗೋಯಾತ್ರೆಯು ಸಂಪೂರ್ಣವಾಗಿ ನಾಡಿನ ಸಂತರ ನೇತೃತ್ವದಲ್ಲಿ ನಡೆಯಲಿದೆ. ಮಂಗಲ ಗೋಯಾತ್ರೆಯ ಸಮಾರೋಪದಂದು ಸಾವಿರ ಸಂತರು ಹಾಗೂ ಲಕ್ಷ ಗೋಪ್ರೇಮಿಗಳು ಒಟ್ಟಾಗಲಿದ್ದು ಗೋಸಂರಕ್ಷಣೆಯ ಶಪಥ ಕೈಗೊಳ್ಳಲಿದ್ದಾರೆ ಎಂದರು.
ಗೋವುಗಳು ರಸ್ತೆಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತಿಂದು ತೊಂದರೆಯನ್ನು ಅನುಭವಿಸುತ್ತಿವೆ, ಗೋವಿನ ಹೊಟ್ಟೆಯಿಂದ ಪ್ಲಾಸ್ಟಿಕ್ ತೆಗೆದು ಗೋವನ್ನು ರಕ್ಷಿಸುವ ಸಲುವಾಗಿ ಗೋ ಆರೋಗ್ಯ ರಕ್ಷಣಾ ಶಿಭಿರವನ್ನು ಆಯೋಜಿಸಲಾಗುತ್ತಿದ್ದು, ಅಮೃತಪಥ ಎಂಬ ಯೋಜನೆಯ ಮುಖಾಂತರ ಹಾದಿ ಬೀದಿಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಸ್ವಚ್ಚತಾ ಆಂದೋಲನಕ್ಕೂ ಕರೆನೀಡಲಾಗಿದ್ದು, ಗೋವು ಸಂಚರಿಸುವ ಪರಿಸರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕಿದ್ದು, ಈ ದಿಶೆಯಲ್ಲಿ ಗೋಪ್ರೇಮಿಗಳು ಕಾರ್ಯಪ್ರವೃತ್ತರಾಗಲು ಕರೆನೀಡಿದರು.
ಪೂಜ್ಯ ಶ್ರೀಕಲ್ಯಾಣ ಸ್ವಾಮಿಜಿ, ಕಲ್ಯಾಣಸ್ವಾಮಿ ಮಠ ಬಳ್ಳಾರಿ, ಕೊಟ್ಟೂರೇಶ್ವರಸ್ವಾಮಿ ಮಠದ ಮ.ನಿ.ಪ್ರ ಶ್ರೀಶಂಕರ ಸ್ವಾಮಿಗಳು, ಪೂಜ್ಯ ಶ್ರೀಮಹೇಶ್ವರ ಸ್ವಾಮಿಜಿ, ನಂದೀಪುರ, ಶ್ರೀಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಜಿ, ಪಂಚವರ್ಣಿಗೆ ಹಿರೇಮಠ, ಪೂಜ್ಯ ಶ್ರೀ ಗಂಗಾಧರ ದೇವರು, ಗುರು ಸಿದ್ಧರಾಮೇಶ್ವರ ವಿರಕ್ತಮಠ, ಆಂದ್ರಪ್ರದೇಶದ ಕಳವಳ್ಳಿಮಠದ ಷ.ಬ್ರ ಚನ್ನವೀರ ಶಿವಾಚಾರ್ಯ ಸ್ವಾಮಿಜಿ, ಯಲಗವಳ್ಳಿ ಹಿರೇಮಠದ ಶ್ರೀಶ್ರೀ ಮೃತ್ಯುಂಜಯ ಸ್ವಾಮಿಜಿ, ಆಂದ್ರದ ಪುರವರ್ಗಮಠದ ಷ.ಬ್ರ ಅಜಾತ ಶಂಭುಲಿಂಗ ಶಿವಾಚಾರ್ಯ ಸ್ವಾಮಿಜಿ ಹಾಗೂ ಗುರುಪಾದದೇವರ ಮಠದ ಷ.ಬ್ರ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಂಗಲಗೋಯಾತ್ರೆಗೆ ತಮ್ಮ ಸಂಪೂರ್ಣ ಸಹಕಾರವನ್ನು ವ್ಯಕ್ತಪಡಿಸಿ, ನಾಡಿನ ಎಲ್ಲಾ ಗೋಪ್ರೇಮಿಗಳು ಸಕ್ರಿಯವಾಗಿ ಗೋಯಾತ್ರೆಯಲ್ಲಿ ಭಾಗವಹಿಸಲು ಕರೆನೀಡಿದರು. ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ ಜಿಲ್ಲೆಗಳಿಂದ ಆಗಮಿಸಿದ್ದ ಗೋಕಿಂಕರರು, ಗೋಪ್ರೇಮಿಗಳು ಹಾಗೂ ಮಂಗಲ ಗೋಯಾತ್ರಾ ಸಮೀತಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.