ಗೋವು ಯೋಗಿಗೂ ಯೋಗವನ್ನು ತಂದುಕೊಡುತ್ತದೆ: ಶ್ರೀರಾಘವೇಶ್ವರ ಭಾರತೀ ಸ್ವಾಮಿ

ಬುಧವಾರ, 24 ಆಗಸ್ಟ್ 2016 (20:46 IST)
ನಮ್ಮ ದೇಶದಲ್ಲಿ ಗೋವಿಗಾಗಿ ಪ್ರಾಣಕೊಟ್ಟವರು ಇದ್ದಾರೆ, ನಾವು ದೇಶೀ ಗೋವಿನ ಹಾಲು ಕುಡಿಯುವ ಸಂಕಲ್ಪ ಮಾಡುವುದರ ಮೂಲಕ ಗೋವನ್ನು ಉಳಿಸಿಕೊಳ್ಳೋಣ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.
 
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಇಂದು ವಿದೇಶೀ ವಸ್ತುಗಳು ನಮ್ಮ ಮನೆಬಾಗಿಲಿಗೆ ಬಂದು ಸೇರುವ ವ್ಯವಸ್ಥೆ ಇದೆ.ಹೀಗಿರುವಾಗ ದೇಶೀ ಗೋವಿನ ಹಾಲು ನಮ್ಮ ಮನೆಯನ್ನು ಸೇರುಲಾಗುವುದಿಲ್ಲವೇ ಎಂದು ಪ್ರಶ್ನಿಸಿದ ಶ್ರೀಗಳು, ದೇಶೀಹಸುವಿನ ಹಾಲನ್ನು ಕುಡಿಯುವ ವಾತಾವರಣ ನಿರ್ಮಾಣವಾದರೆ, ಹಾಲನ್ನು ಪೂರೈಸುವ ವಾತಾವರಣವೂ ನಿರ್ಮಾಣವಾಗುತ್ತದೆ. ಹಾಲನ್ನು ಸೇವಿಸಿದರೆ ನಮಗೆ ಮಾತ್ರವಲ್ಲ, ಗೋವಿಗೂ ಒಳ್ಳೆಯದಾಗುತ್ತದೆ. ದೇಶೀ ಹಾಲನ್ನು ಕುಡಿದರೆ ಗೋರಕ್ಷಣೆ ಸಾಧ್ಯ ಎಂದು ಆಶಿಸಿದರು.
 
ಗೋವು ಯೋಗಿಗೂ ಯೋಗವನ್ನು ತಂದುಕೊಡುತ್ತದೆ, ಹಾಲಿನಿಂದ ಸತ್ವಗುಣ, ಶ್ಲೇಷ್ಮಗುಣ ವೃದ್ಧಿಯಾಗುವುದರ ಮುಖಾಂತರ ಮನಸ್ಸಿಗೆ ಶಾಂತತೆ, ದೇಹಕ್ಕೆ ದೃಡತೆ ಉಂಟಾಗುತ್ತದೆ ಎಂದರು.
 
ಹೊಸೂರಿನ ಬ್ರಹ್ಮಶ್ರೀ ಶ್ರೀವೇಂಕಟೇಶ್ವರ ಸ್ವಾಮಿಗಳು ಸಂತಸಂದೇಶ ನೀಡಿ, ಗೋವಿದ್ದಲ್ಲಿ ಆರೋಗ್ಯ ಇರುತ್ತದೆ. ಉಪಕಾರ ಮಾಡಿದವರಿಗೆ ಮಾತರವಲ್ಲ, ಅಪಕಾರ ಮಾಡಿದವರಿಗೂ ಗೋವು ಅಮೃತಸಮಾನವಾದ ಹಾಲನ್ನು ನೀಡುತ್ತದೆ ಎಂದರು.
 
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡರಾದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಾತನಾಡಿ, ಗೋವುಗಳಿಗಾಗಿಯೇ ಜೀವನವನ್ನು ಮುಡಿಪಾಗಿಟ್ಟವರು ಪೂಜ್ಯ ರಾಘವೇಶ್ವರಭಾರತೀ ಸ್ವಾಮಿಗಳು. ಗೋಚಾತುರ್ಮಾಸ್ಯದ ಮೂಲಕ ಗೋಜಾಗೃತಿಯನ್ನು ಉಂಟುಮಾಡುತ್ತಿದ್ದಾರೆ, ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಗೋಸೇವೆಗೆ ಮುಂದಾಗೋಣ ಎಂಬ ಕರೆಯನ್ನು ನೀಡಿದರು.
 
ಬೆಂಗಳೂರು ನಗರದಲ್ಲಿದ್ದರೂ ದೇಶೀಯ ಹಸುವನ್ನು ಸಂರಕ್ಶಿಸಿ ಮಾದರಿಯಾಗಿರುವ ಕುಮಾರ್ ಜಹಗೀರದಾರ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಗೋಸೇವಾ ಪುರಸ್ಕಾರ ಸ್ವೀಕರಿಸಿದ ಕುಮಾರ್ ಜಹಗೀರದಾರ ಅವರು, ಗವ್ಯೋತ್ಪನ್ನಗಳ ಶ್ರೇಷ್ಠತೆಯನ್ನು ಹಾಗೂ ಗೋವಿನೊಂದಿಗೆ ತಮ್ಮ ಒಡನಾಟವನ್ನು ಹಂಚಿಕೊಂಡರು. ಶ್ರೀಭಾರತೀಪ್ರಕಾಶನವು ಹೊರತಂದ ವಿಚಾರವಿಹಾರ 3  ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯಮುದ್ರಿಕೆಯನ್ನು ಬ್ರಹ್ಮಶ್ರೀ ಶ್ರೀವೇಂಕಟೇಶ್ವರ ಸ್ವಾಮಿಗಳು ಲೋಕಾರ್ಪಣೆ ಮಾಡಿದರು.ಗೋಸಂದೇಶ ಸಭೆಯಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್, ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹಾಗೂ ಗೋಪಾಲ್ ಚಿಟ್ಟಿಯಾರ್ ಅವರನ್ನು ಶ್ರೀಗಳು ಆಶೀರ್ವದಿಸಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಶ್ರೀಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ನಡೆಯಿತು.
 
ಮಂಗಳೂರು ಮಂಡಲಾಂತರ್ಗತ ಕೇಪು, ವಿಟ್ಲ, ಕಲ್ಲಡ್ಕ ಹಾಗೂ ಕುಂದಾಪುರ  ವಲಯದವರಿಂದ ಸರ್ವಸೇವೆ ನೆರವೆರಿತು. ಇಸ್ರೋದ ನಿವೃತ್ತ ವಿಜ್ಞಾನಿಗಳಾದ ಶ್ರೀ ಪಿ ಜೆ ಭಟ್, ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು. 
 
 
ಕೋಟ್ಸ್
 
ಇಂದು ವಿದೇಶೀ ವಸ್ತುಗಳು ನಮ್ಮ ಮನೆಬಾಗಿಲಿಗೆ ಬಂದು ಸೇರುವ ವ್ಯವಸ್ಥೆ ಇದೆ. ಹೀಗಿರುವಾಗ ದೇಶೀ ಗೋವಿನ ಹಾಲು ನಮ್ಮ ಮನೆಯನ್ನು ಸೇರುಲಾಗುವುದಿಲ್ಲವೇ?
  - ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ
 
ಗೋವಿದ್ದಲ್ಲಿ ಆರೋಗ್ಯ ಇರುತ್ತದೆ. ಅಪಕಾರ ಮಾಡಿದವರಿಗೂ ಗೋವು ಅಮೃತಸಮಾನವಾದ ಹಾಲನ್ನು ನೀಡುತ್ತದೆ.
                             - ಹೊಸೂರಿನ ಬ್ರಹ್ಮಶ್ರೀ ಶ್ರೀವೇಂಕಟೇಶ್ವರ ಸ್ವಾಮಿಗಳು
 
ಗೋವುಗಳಿಗಾಗಿಯೇ ಜೀವನವನ್ನು ಮುಡಿಪಾಗಿಟ್ಟವರು ಪೂಜ್ಯ ರಾಘವೇಶ್ವರಭಾರತೀ ಸ್ವಾಮಿಗಳು. ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಗೋಸೇವೆಗೆ ಮುಂದಾಗೋಣ.
- ಕಲ್ಲಡ್ಕ ಪ್ರಭಾಕರ್ ಭಟ್
 
ಇಂದಿನ ಕಾರ್ಯಕ್ರಮ (25.08.2016):
ಬೆಳಗ್ಗೆ 7.00 : ಕಾಮಧೇನು ಹವನ
ಬೆಳಗ್ಗೆ 9.00: ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.00 : ಶ್ರೀಕೃಷ್ಣಾಷ್ಟಮಿಯ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ( ವಿವರ ಲಗತ್ತಿಸಿದೆ)

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ