ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಅದ್ಧೂರಿ ಮೆರವಣಿಗೆ ಬಂದು ನಾಮಪತ್ರ ಸಲ್ಲಿಸಿದ ಸಿಪಿ ಯೋಗೇಶ್ವರ್

Krishnaveni K

ಗುರುವಾರ, 24 ಅಕ್ಟೋಬರ್ 2024 (14:19 IST)
ಚನ್ನಪಟ್ಟಣ: ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರ ಜೊತೆ ಅದ್ಧೂರಿ ಮೆರವಣಿಗೆಯಲ್ಲಿ ಬಂದು ಚನ್ನಪಟ್ಟಣ ಉಪಚುನಾವಣೆಗೆ ಇಂದು ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸಿದರು.

ನಿನ್ನೆಯಷ್ಟೇ ಸಿಪಿ ಯೋಗೇಶ್ವರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಮರಳಿ ಕಾಂಗ್ರೆಸ್ ಗೆ ಸೇರ್ಪಡೆಯಾದ ಬೆನ್ನಲ್ಲೇ ಅವರಿಗೆ ಚನ್ನಪಟ್ಟಣದಿಂದ ಕಾಂಗ್ರೆಸ್ ಟಿಕೆಟ್ ಖಚಿತವಾಗಿತ್ತು. ಈ ಹಿನ್ನಲೆಯಲ್ಲಿ ಇಂದೇ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದರು. ನಿನ್ನೆಯೇ ತಮ್ಮ ಜೊತೆ ಸಿಎಂ, ಡಿಸಿಎಂ ಬರಲಿದ್ದಾರೆ ಎಂದು ಯೋಗೇಶ್ವರ್ ಹೇಳಿಕೊಂಡಿದ್ದರು.

ಅದರಂತೆ ಇಂದು ಚನ್ನಪಟ್ಟಣ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಗುರುವಾರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಡಿ.ಕೆ ಸುರೇಶ್, ಸಚಿವರಾದ ಬೈರತಿ ಸುರೇಶ್, ಎಂ.ಸಿ ಸುಧಾಕರ್, ಶಾಸಕರಾದ ಮಾಗಡಿ ಬಾಲಕೃಷ್ಣ, ಡಾ. ರಂಗನಾಥ್, ಕದಲೂರು ಉದಯ್, ನೆಲಮಂಗಲ ಶ್ರೀನಿವಾಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ ರೇವಣ್ಣ, ಮಾಜಿ ಶಾಸಕ ಎಂ.ಸಿ ಅಶ್ವತ್ಥ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್ ರವಿ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಚುನಾವಣಾಧಿಕಾರಿಗಳ ಬಳಿ ತೆರಳಿ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ನಿಂದ ಟಿಕೆಟ್ ಖಚಿತವಾದ ಬಳಿಕವಷ್ಟೇ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಇತ್ತ ಜೆಡಿಎಸ್ ಇದುವರೆಗೆ ತನ್ನ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಿಲ್ಲ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ