ಸಿ.ಟಿ. ರವಿ ವಿರುದ್ಧದ ವಿಡಿಯೋ ರಿಲೀಸ್ ಮಾಡಿ ಮೋದಿಯನ್ನು ಭೇಟಿಯಾಗುತ್ತೇನೆಂದ ಸಚಿವೆ ಹೆಬ್ಬಾಳ್ಕರ್‌

Sampriya

ಸೋಮವಾರ, 23 ಡಿಸೆಂಬರ್ 2024 (13:57 IST)
ಬೆಳಗಾವಿ: ಸುವರ್ಣಸೌಧದಲ್ಲಿ ಡಿ.19ರಂದು ನಡೆದ ವಿಧಾನ ಪರಿಷತ್ ಕಲಾಪದಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಬಳಸಿದ್ದಾರೆ ಎನ್ನಲಾದ ಅಸಭ್ಯ ಹೇಳಿಕೆಯ ವಿಡಿಯೋವೊಂದನ್ನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಬಿಡುಗಡೆ ಮಾಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್‌, ಯಾವುದೇ ಕಾರಣಕ್ಕೂ ಸಿ.ಟಿ ರವಿ ಕ್ಷಮಿಸುವ ಪ್ರಮೇಯ ಇಲ್ಲ. ಈ ಲಕ್ಷ್ಮಿ ಹೆಬ್ಬಾಳ್ಕರ್‌ ಯಾವತ್ತಿಗೂ ಕ್ಷಮಿಸಲ್ಲ. ಅವರಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ. ಮುಖ್ಯಮಂತ್ರಿ ಮತ್ತು ಸಭಾಪತಿ ಅವರು ಈ ಬಗ್ಗೆ ತನಿಖೆ ಮಾಡಬೇಕು. ಆದಷ್ಟು ಬೇಗೆ ಎಫ್‌ಎಸ್‌ಎಲ್ ರಿಪೋರ್ಟ್ ತರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಿಟಿ ರವಿಯವರೇ ನನಗೆ ಆ ಪದ ಬಳಸಿದೀರಿ. ಇಂತಹ ನೂರು ಸಿ.ಟಿ ರವಿ ಬಂದ್ರೂ ನಾನು ಎದುರಿಸುತ್ತೇನೆ. ನನ್ನ ಬಳಿ ದಾಖಲೆ ಇವೆ. ಇಂದೇ ಬಿಡುಗಡೆ ಮಾಡ್ತೇನಿ. ನಿಮಗೆ ನಾಚಿಗೆ ಆಗಬೇಕು ಎಂದು ಹರಿಹಾಯ್ದರು.

ಈ ಬಗ್ಗೆ ಪ್ರಧಾನಿ ಮೋದಿ, ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ. ಅವಕಾಶ ಸಿಕ್ಕರೆ ಪ್ರಧಾನಿ ಮೋದಿಯವರನ್ನ ಭೇಟಿ ಆಗಿ ವಿಷಯ ತಿಳಿಸುತ್ತೇನೆ. ರಾಜಕಾರಣದಲ್ಲಿ ಹಿಂದಕ್ಕೆ ಸರಿಸಬೇಕು ಅಂತಾ ಮಾಡಿದ್ದಾರೆ. ನಾವು ಇದರಿಂದ ನೊಂದುಕೊಂಡು ಮನೆಯಲ್ಲಿ ಕೋರುತ್ತೇವೆ ಅಂತಾ ಅಂದುಕೊಂಡಿದ್ರೆ ಈಗಲೇ ಬಿಟ್ಟುಬಿಡಿ ಎಂದು ತಿರುಗೇಟು ನೀಡಿದ್ದಾರೆ.

ನಮ್ಮ ಪಕ್ಷದ ಪ್ರತಿಯೊಬ್ಬರು ನಮ್ಮ ಜೊತೆಗಿದ್ದಾರೆ. ಪ್ರಿಯಾಂಕಾ ಗಾಂಧಿ ಅವರಿಂದ ಹಿಡಿದು ಎಲ್ಲರೂ ಫೋನ್‌ ಮಾಡಿ ಮಾತಾಡಿದ್ದಾರೆ. ಸಿಎಂ ಅವರು ನಿನ್ನೆ ಮೊನ್ನೆ ಕರೆ ಮಾಡಿ ನನ್ನ ಜೊತೆಗೆ ಮಾತಾಡಿದ್ದಾರೆ. ಈ ರಾಜ್ಯದ ಮಹಿಳೆಯರು ನನ್ನ ಜೊತೆಗೆ ಇದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ