ಕಾಂಗ್ರೆಸ್ಸಿನ 9 ಲೋಕಸಭಾ ಸೀಟ್ ಗೆಲುವಿನಲ್ಲಿ ಯಾವುದೋ ಷಡ್ಯಂತ್ರ: ಸಿ.ಟಿ.ರವಿ ಆರೋಪ

Krishnaveni K

ಶುಕ್ರವಾರ, 25 ಜುಲೈ 2025 (16:45 IST)
ದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು 9 ಲೋಕಸಭಾ ಸೀಟ್ ಗೆಲ್ಲುವಲ್ಲಿ ಯಾವುದೋ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ.

ಇಲ್ಲಿನ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಷಡ್ಯಂತ್ರ ಮೀರಿ ಎನ್‍ಡಿಎ 19 ಸೀಟ್ ಗೆದ್ದಿದ್ದು ಅದು ಪ್ರಜಾಪ್ರಭುತ್ವದ ಗೆಲುವು. ಇಲ್ಲದೇ ಇದ್ದರೆ, ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ಗೆಲ್ಲಲು ಹೇಗೆ ಸಾಧ್ಯವಾಗುತ್ತಿತ್ತು ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿಕ್ಕೋಡಿ, ದಾವಣಗೆರೆ, ಚಾಮರಾಜನಗರ, ಹಾಸನದಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ಚುನಾವಣಾ ಅಕ್ರಮ ನಡೆಸಿಯೇ ಗೆದ್ದಿದ್ದಾರೆ ಅನಿಸುತ್ತದೆ. ಕಾಂಗ್ರೆಸ್ಸಿನವರೇ ಚುನಾವಣಾ ಅಕ್ರಮ ನಡೆಸಿದ್ದಾರೆಂಬ ಅನುಮಾನ ತಮ್ಮದು ಎಂದು ನುಡಿದರು. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ಆಗಬೇಕೆಂದು ಒತ್ತಾಯಿಸಿದರು.

ಮುಖ್ಯಮಂತ್ರಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಚುನಾವಣಾ ಮತದಾರರ ಪಟ್ಟಿಯಲ್ಲಿ ಕರ್ನಾಟಕದಲ್ಲೂ ಅಕ್ರಮ ಆಗಿದೆ ಎಂದು ಹೇಳಿದ್ದಾರೆ. ನನಗೂ ಅನುಮಾನ ಬಂದಿತ್ತು. ಕಾಂಗ್ರೆಸ್- ಜೆಡಿಎಸ್ ಒಟ್ಟಾಗಿ ಇದ್ದಾಗಲೇ 2019ರಲ್ಲಿ ಒಂದೊಂದು ಸೀಟ್ ಗೆದ್ದಿದ್ದವು. 2024ರಲ್ಲಿ ಕಾಂಗ್ರೆಸ್ಸಿನವರು ಹೇಗೆ 9 ಲೋಕಸಭಾ ಸೀಟ್ ಗೆದ್ದರು ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗಕ್ಕೆ ಅವರದೇ ಆದ ಅಧಿಕೃತ ಅಧಿಕಾರಿಗಳ ಜಾಲ ಇರುವುದಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು, ಶಾಲಾ ಶಿಕ್ಷಕರನ್ನು ಬಳಸಿಕೊಂಡು ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಾರೆ. ಬಹುತೇಕ ಜನರು ಸರಕಾರದ ಮರ್ಜಿಗೆ ಒಳಪಟ್ಟಿರುತ್ತಾರೆ ಎಂದು ಭಾವಿಸುವುದಾದರೆ, ರಾಜ್ಯದಲ್ಲಿ ಆಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಅಕ್ರಮ ನಡೆಸುವ ಹೆಚ್ಚು ಅವಕಾಶ ಯಾರಿಗೆ ಇರುತ್ತದೆ ಎಂದು ಕೇಳಿದರು.
 
ಕಾಂಗ್ರೆಸ್ ಪಕ್ಷದ ನಿರ್ದೇಶನದಡಿ ಚುನಾವಣಾ ಅಕ್ರಮ?
2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಇಂಥದ್ದೇನೋ ನಡೆಸಿರುವ ಸಾಧ್ಯತೆ ಇದೆ. ಸಿದ್ದರಾಮಯ್ಯನವರ ಗೆಲುವಿನ ಸಾಧ್ಯತೆ ಬಗ್ಗೆ ಜನರು ಅನುಮಾನ ಪಡುತ್ತಿದ್ದರು. ಮೆಡಿಕಲ್ ಕಾಲೇಜು ಕೊಟ್ಟಿದ್ದು, 5 ಸಾವಿರ ಕೋಟಿ ರೂ.ಗಳ ಕೆಲಸ ಮಾಡಿದ ಸಿ.ಟಿ.ರವಿ ಸೋಲಿಸಲು ಕಷ್ಟ ಎನ್ನುತ್ತಿದ್ದರು. ನನ್ನ ಸೋಲಿನಲ್ಲೂ ಇಂಥ ಅಕ್ರಮ ನಡೆಸಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದರು.
2024ರಲ್ಲಿ ಕಾಂಗ್ರೆಸ್ ಲೋಕಸಭೆಯ ಒಂದು ಸೀಟೂ ಗೆಲ್ಲಲು ಕಷ್ಟ ಇತ್ತು. 9 ಸೀಟ್ ಹೇಗೆ ಗೆದ್ದರು? ಇದೆಲ್ಲ ನೋಡಿದಾಗ ಕಾಂಗ್ರೆಸ್ ಪಕ್ಷದ ನಿರ್ದೇಶನದ ಮೇರೆಗೆ ಚುನಾವಣಾ ಅಕ್ರಮವನ್ನು ನಡೆಸಿರುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
 
ಕಾಂಗ್ರೆಸ್ ಪಕ್ಷದ ವಿರುದ್ಧ ಚುನಾವಣಾ ಅಕ್ರಮದ ಮೊಕದ್ದಮೆ ದಾಖಲಾಗಿ ಸಾಬೀತಾಗಿದೆ. ಅಲಹಾಬಾದ್ ಹೈಕೋರ್ಟಿನ ಜಸ್ಟಿಸ್ ಜಗಮೋಹನ್ ಲಾಲ್ ಸಿನ್ಹ ಅವರು ಶ್ರೀಮತಿ ಇಂದಿರಾ ಗಾಂಧಿಯವರು ಚುನಾವಣಾ ಅಕ್ರಮ ನಡೆಸಿದ್ದಾರೆಂದು 1975ರಲ್ಲಿ ತೀರ್ಪು ಕೊಟ್ಟರು. ಸಂಸದರ ಸ್ಥಾನದ ಅನರ್ಹತೆ ಮತ್ತು 6 ವರ್ಷ ಸ್ಪರ್ಧಿಸುವಂತಿಲ್ಲ ಎಂದು ತೀರ್ಪು ತಿಳಿಸಿತ್ತು. ಆದರೆ, ಆಗ ಕಾಂಗ್ರೆಸ್ ಪಕ್ಷ ರಾಜೀನಾಮೆ ಕೊಟ್ಟು ಇದನ್ನು ಎದುರಿಸಲಿಲ್ಲ; ತುರ್ತು ಪರಿಸ್ಥಿತಿ ಹೇರಿತ್ತು. ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದಲ್ಲದೇ ಸಂವಿಧಾನವನ್ನು ತಿರುಚುವ ಕೆಲಸ ಮಾಡಿತ್ತು. ಅವರಿಗೆ ಕ್ರಿಮಿನಲ್ ಚರಿತ್ರೆ ಇದೆ. ಅಕ್ರಮ ಎಸಗಿದ ಕ್ರಿಮಿನಲ್ ಚರಿತ್ರೆ ಅವರದು. ಈ ಅಪರಾಧ ಕೋರ್ಟಿನಲ್ಲೇ ಸಾಬೀತಾಗಿದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.

ಕಾಂಗ್ರೆಸ್ ಪಕ್ಷಕ್ಕೇ ಅಪರಾಧ ಮಾಡುವ ಹಿನ್ನೆಲೆ ಮತ್ತು ಸಾಮಥ್ರ್ಯ ಗರಿಷ್ಠ ಪ್ರಮಾಣದಲ್ಲಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಕಂದಾಯ ಅಧಿಕಾರಿಗಳು, ಶಿಕ್ಷಕರನ್ನು ಬಳಸುತ್ತಾರೆ. ಅವರು ಯಾರ ನಿಯಂತ್ರಣದಲ್ಲಿ ಇರುತ್ತಾರೆ ಎಂದು ಕೇಳಿದರು. ಬಿಜೆಪಿಗೆ ಆ ಹಿನ್ನೆಲೆ ಅಥವಾ ಮಾನಸಿಕ ಸ್ಥಿತಿ ಇಲ್ಲ; ಕಾಂಗ್ರೆಸ್ಸಿನದು ಸಾಬೀತಾದ ಆಪಾದನೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ತಾನು ಕಳ್ಳ ಪರರನ್ನು ನಂಬ ಎಂಬ ಗಾದೆ ಮಾತಿದೆ. ಕ್ರಿಮಿನಲ್ ಹಿನ್ನೆಲೆ ಉಳ್ಳವರು, ಅದನ್ನೇ ಮಾಡುತ್ತಿರುವವರು ಇನ್ನೊಬ್ಬರನ್ನೂ ಅನುಮಾನ ಪಡುತ್ತಾರೆ ಎಂದು ತಿಳಿಸಿದರು.
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ