ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಬಳಕೆ: ಎಲ್ಲಾ ನಾನು ನಂಬಲ್ಲ ಎಂದ ಸಿಟಿ ರವಿ

Krishnaveni K

ಶುಕ್ರವಾರ, 17 ಜನವರಿ 2025 (15:43 IST)
ಬೆಂಗಳೂರು: ಇವೆಲ್ಲ ಅಂತೆಕಂತೆಗಳು; ನೆಗೆಟಿವ್ ನರೇಟಿವ್ ಸೃಷ್ಟಿಸಲು ಮಾಡಿರುವ ಒಂದು ಷಡ್ಯಂತ್ರದ ಭಾಗ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಿಳಿಸಿದ್ದಾರೆ.
 
ವಿಧಾನಸೌಧದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಥರದ ಷಡ್ಯಂತ್ರವನ್ನು ದುರುದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ; ಎಫ್‍ಎಸ್‍ಎಲ್ ಆಗಿಲ್ಲ; ತನಿಖೆಯೇ ಆಗಿಲ್ಲ; ಸುದ್ದಿ ಪ್ಲಾಂಟ್ ಆಗುವುದಾದರೆ, ಇದರ ಹಿಂದೆ ದುರುದ್ದೇಶ ಇದೆ. ಕೆಲವರು ತಮ್ಮ ಮಾನ ಉಳಿಸಿಕೊಳ್ಳಲು ವಾಮಮಾರ್ಗ ಹಿಡಿದಿದ್ದಾರೆ ಎಂದು ಆರೋಪಿಸಿದರು.
 
ನಾನು 19ರ ರಾತ್ರಿ ಖಾನಾಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೆ. ಅದರಲ್ಲಿ ನನ್ನ ಮೇಲೆ ಹಲ್ಲೆ ಮಾಡಿದವರ ವಿವರ ಕೊಟ್ಟಿದ್ದೆ. ಹಲ್ಲೆಗೆ ಕುಮ್ಮಕ್ಕು ಕೊಟ್ಟವರ ವಿವರ ಕೊಟ್ಟಿದ್ದೇನೆ. ಇವತ್ತಿನವರೆಗೆ ಎಫ್‍ಐಆರ್ ಮಾಡಿಲ್ಲ ಎಂದು ಆಕ್ಷೇಪಿಸಿದರು. ಈ ದೇಶದಲ್ಲಿ ನನಗೊಂದು, ಬೇರೆಯವರಿಗೆ ಒಂದು ಸಂವಿಧಾನ ಇಲ್ಲ; ನನಗೊಂದು ಬೇರೆಯವರಿಗೆ ಇನ್ನೊಂದು ಕಾನೂನಿಲ್ಲ ಎಂದು ತಿಳಿಸಿದರು.
 
ನನ್ನ ವಿರುದ್ಧ ಕೊಟ್ಟ ದೂರು ಕ್ಷಣಮಾತ್ರದಲ್ಲಿ ಎಫ್‍ಐಆರ್ ಆಗುತ್ತದೆ. ನಾನು ಕೊಟ್ಟ ದೂರು ಎಫ್‍ಐಆರ್ ಆಗುವುದಿಲ್ಲ ಎಂದಾದರೆ, ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸುತ್ತಿಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಡ ಎಂದು ವಿಶ್ಲೇಷಿಸಿದರು. ಇವರು ನಡೆಸುವ ತನಿಖೆ ಪ್ರಾಮಾಣಿಕವಾಗಿ ಇರುವುದಾಗಿ ಹೇಗೆ ಭಾವಿಸುತ್ತೀರಿ ಎಂದು ಪ್ರಶ್ನಿಸಿದರು.
 
ಮುಖಭಂಗ ಆಗುವುದನ್ನು ತಪ್ಪಿಸಲು ಸರಕಾರದಲ್ಲಿರುವ ಕೆಲವರು ಅಡ್ಡದಾರಿ ಹಿಡಿದಿದ್ದಾರೆ. ಅಂತಿಮ ಜಯ ಸತ್ಯಮೇವ ಜಯತೇ. ಅಂತಿಮ ಜಯ ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತನಿಖೆಯ ಹಂತದಲ್ಲಿ ನಾನು ವಿಷಯಗಳನ್ನು ವಿವರವಾಗಿ ಹೇಳಲಾಗದು; ನಾನೇನು ಹೇಳಬೇಕೋ ಅದನ್ನು ಸಭಾಪತಿಗಳಿಗೆ ಹೇಳಿದ್ದೇನೆ. ಸಭಾಪತಿಗಳು ದಾಖಲೆಗಳನ್ನು ಪರಿಶೀಲಿಸಿಯೇ ರೂಲಿಂಗ್ ಕೊಟ್ಟಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಆ ರೂಲಿಂಗ್ ಪ್ರಶ್ನಿಸಿದರೆ ಅದು ಸಂವಿಧಾನವನ್ನು ಪ್ರಶ್ನಿಸಿದಂತೆ ಎಂದು ನುಡಿದರು.
 
ಮಾಧ್ಯಮಗಳು ಎಫ್‍ಎಸ್‍ಎಲ್ ವರದಿ ಕುರಿತ ಮೂಲವನ್ನು ಹೇಳದ ಕಾರಣ ನಾನು ಊಹೆ ಮೇಲೆ ಮಾತನಾಡುವುದಿಲ್ಲ ಎಂದ ಅವರು, ರಾಜ್ಯದಲ್ಲಿರುವ ಪೊಲೀಸರು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದರು. ನಾನು ಮಾನ್ಯ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ಡಿಜಿಪಿ- ಐಜಿಪಿಗೆ ದೂರು ಕೊಟ್ಟಿದ್ದೇನೆ. ನಾನು ಕೊಟ್ಟ ದೂರು ದಾಖಲಿಸಿಲ್ಲ; ನನ್ನ ಮೇಲೆ ಪೊಲೀಸ್ ದೌರ್ಜನ್ಯ ನಡೆದುದಾಗಿ ತಿಳಿಸಿದ್ದೆ. ಇವತ್ತಿನವರೆಗೂ ನಾನು ಕೊಟ್ಟ ದೂರಿನ ಎಫ್‍ಐಆರ್ ಮಾಡಿಕೊಂಡಿಲ್ಲ ಎಂದು ಟೀಕಿಸಿದರು. ಪೊಲೀಸ್ ಮಾರ್ಗಸೂಚಿ ಏನು ಹೇಳುತ್ತದೆ ಎಂದು ಪ್ರಶ್ನೆ ಮಾಡಿದರು.
 
20 ವರ್ಷ ಶಾಸಕನಾಗಿ, 2 ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಈಗಲೂ ವಿಧಾನಪರಿಷತ್ತಿನ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ದೂರಿಗೇ ಈ ರೀತಿ ಆದರೆ, ಜನಸಾಮಾನ್ಯರ ದೂರಿನ ಪರಿಸ್ಥಿತಿ ಏನು ಎಂದು ಕೇಳಿದರು.
 
ದತ್ತಪೀಠವೇ ಬೇರೆ, ಬಾಬಾ ಬುಡನ್ ದರ್ಗಾ ಬೇರೆ ಸರ್ವೇ ನಂಬರ್‍ನಲ್ಲಿವೆ ಎಂದು ಅವರು ಮಾಹಿತಿ ಕೊಟ್ಟರು. ಬಾಬಾ ಬುಡನ್ ದರ್ಗಾದಲ್ಲಿ ಸೂಫಿ ಪಂಥದ ಎಲ್ಲವನ್ನು ಅನುಷ್ಠಾನಗೊಳಿಸಿ; ದತ್ತಾತ್ರೇಯ ಪೀಠದಲ್ಲಿ ಹಿಂದೂ ಪದ್ಧತಿಗೆ ಮಾತ್ರ ಅವಕಾಶ ಕೊಡುವಂತೆ ಇಂದು ಗೃಹ ಸಚಿವರು ಕರೆದ ಸಭೆಯಲ್ಲಿ ತಿಳಿಸಿದ್ದೇವೆ. ದಾಖಲೆ ಆಧರಿಸಿ ಕ್ರಮ ಕೈಗೊಳ್ಳಲು ವಿನಂತಿಸಿದ್ದೇವೆ ಎಂದು ಅವರು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ