ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿಟಿ ರವಿ ಔಟ್

ಶನಿವಾರ, 29 ಜುಲೈ 2023 (20:30 IST)
ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ ಎಚ್ವೆತ್ತುಕೊಂಡಿರೋ ಹಾಗಿದೆ. ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಶತಾಯ ಗತಾಯ ಸ್ಥಾನ ಹೆಚ್ಚಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಬದಲಾವಣೆಯತ್ತ ಚಿತ್ತ ಹರಿಸಿದೆ. ಕರ್ನಾಟಕ ಅಷ್ಟೆ ಅಲ್ಲದೆ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಪದಾಧಿಕಾರಿಗಳನ್ನ ಬದಲಾವಣೆ ಮಾಡಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕರ್ನಾಟಕದ ಸಿ.ಟಿ ರವಿ ಅವರಿಗೆ ಕೊಕ್ ನೀಡಿದೆ.

ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಇದೀಗ ಬಿಜೆಪಿ ಲೋಕಸಭಾ ಚುನಾವಣೆಗೆ ಒಂದಿಷ್ಟು ತಂತ್ರಗಳನ್ನು ಮಾಡ್ತಾ ಇದೆ. ಇದರ ನಡುವೆ ಪಕ್ಷದಲ್ಲಿ ಒಂದಿಷ್ಟು ಬದಲಾವಣೆ ತರಬೇಕು ಎನ್ನುವ ನಿಟ್ಟಿನಲ್ಲಿ ಪದಾಧಿಕಾರಿಗಳನ್ನ ಬದಲಾಯಿಸಿದೆ. ಅದರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ.ರವಿ ಅವರಿಗೆ ಕೋಕ್ ಕೊಟ್ಟಿರೋದು ಮತ್ತೊಂದು ಚರ್ಚೆಗೆ ಕಾರಣವಾಗಿದೆ. 

 ಹೌದು, ಕರ್ನಾಟಕ ಬಿಜೆಪಿಯಲ್ಲಿ ಕಳೆದ ಕೆಲ ಸಮಯದಿಂದ ಭಾರೀ ಚರ್ಚೆಯಲ್ಲಿರುವ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆ ಬಹುತೇಕ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ ಅನ್ನಿಸುತ್ತೆ. ಕಳೆದ ಕೆಲ ಸಮಯದಿಂದ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರು ಚಾಲ್ತಿಯಲ್ಲಿ ಇದ್ದವು. ಇದೀಗ ಮೂಲಗಳ ಪ್ರಕಾರ ಸಿ.ಟಿ ರವಿಯವರನ್ನ ನೂತನ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎನ್ನಲಾಗಿದೆ. ಅದಕ್ಕಾಗಿಯೇ ಕೇಂದ್ರೀಯ ಪದಾಧಿಕಾರಿ ಹುದ್ದೆಯಿಂದ ರವಿ ಅವರನ್ನ ಕೆಳಗಿಳಿಸಿದೆ ಎಂದು ಹೇಳಲಾಗಿದೆ. ಇನ್ನು ರಾಜ್ಯಾಧ್ಯಕ್ಷ ಹುದ್ದೆಯನ್ನೂ ಕೊಟ್ಟು ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನ ಕೊಡಬಹುದಿತ್ತು. ಆದರೆ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ಅಲಿಖಿತ ನಿಯಮ ಇರೋದ್ರಿಂದ ಸಿಟಿ ರವಿ ಅವರನ್ನು ಕೆಳಗಿಸಲಾಗಿದೆ ಎನ್ನಲಾಗುತ್ತಿದೆ. ಈ ಬೆಳವಣಿಗೆಯಿಂದ ಸಿಟಿ ರವಿ ಬಿಜೆಪಿಯ ಮುಂದಿನ ರಾಜ್ಯಾಧ್ಯಕ್ಷ ಎನ್ನುವುದಕ್ಕೆ ಪುಷ್ಠಿ ನೀಡುವಂತಿದೆ.

ಸದ್ಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧಿಕೃತ ಅವಧಿ ಕಳೆದ ಸಪ್ಟೆಂಬರ್ ತಿಂಗಳಿಗೆ ಅಂತ್ಯವಾಗಿದೆ. ಆದರೆ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅವರನ್ನೇ ಮುಂದುವರಿಸಲಾಗಿತ್ತು. ಇನ್ನು ರಾಜ್ಯದಲ್ಲಿ ವಿಧಾನಸಭೆ ಸೋಲಿನ ಬಳಿಕ ರಾಜ್ಯಾಧ್ಯಕ್ಷರ ಬದಲಾವಣೆ ನಿಶ್ಚಿತವಾಗಿ ಮಾಡಲೇ ಬೇಕಾಗಿದೆ. ಇನ್ನು ರಾಜ್ಯಾಧ್ಯಕ್ಷರ ಹುದ್ದೆಯನ್ನ ಸಿಟಿ ರವಿಗೆ ಕೊಡಬೇಕು ಎನ್ನುವ ಚಿಂತನೆಯ ಹಿಂದೆ ಒಂದು ಪ್ರಬಲ ಕಾರಣವಿದೆ. ಲೋಸಕಭಾ ಚುನಾವಣೆಯಲ್ಲಿ ಒಕ್ಕಲಿಗ ಮತ ಸೆಳೆಯುವುದು ಕೂಡ ಒಂದು ದೊಡ್ಡ ಕೆಲಸ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಬಲ ಸಮುದಾಯ ಎನಿಸಿಕೊಂಡಿರುವ ಒಕ್ಕಲಿಗ ಸಮುದಾಯದ ವ್ಯಕ್ತಿಯನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ವರ್ಕ್ ಆಗಬಹುದು ಎಂಬ ಲೆಕ್ಕಾಚಾರ ಕೂಡ ಇದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ