ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ರಾಜ್ಯ ಸರಕಾರ ತೋರಿಸಬೇಕಿತ್ತು. ಚನ್ನಾರೆಡ್ಡಿ ಮೇಲೆ ಅಟ್ರಾಸಿಟಿ ಕೇಸ್ ದಾಖಲಾದರೆ ಅವರನ್ನು ಬಂಧಿಸುವುದಿಲ್ಲ. ಮುನಿರತ್ನ ಮೇಲೆ ಅಟ್ರಾಸಿಟಿ ಕೇಸ್ ಆದರೆ ಅರೆಸ್ಟ್ ಮಾಡ್ತಾರೆ. ಚಲುವರಾಯಸ್ವಾಮಿ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ, ಎಫ್‍ಐಆರ್ ಕೂಡ ದಾಖಲಾಗುವುದಿಲ್ಲ. ಮುನಿರತ್ನ ಮೇಲೆ
ಭ್ರಷ್ಟಾಚಾರದ ಆರೋಪ ಬಂದರೆ, ಎಫ್‍ಐಆರ್ ದಾಖಲಾಗುತ್ತದೆ ಎಂದು ತಿಳಿಸಿದರು.
ಈ ಸರಕಾರ ದ್ವೇಷದ ರಾಜಕಾರಣ ಮಾಡುವುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಎಂದು ಅವರು ಪ್ರಶ್ನಿಸಿದರು. ತನಿಖೆ ಮಾಡಿ ತಪ್ಪಾಗಿದ್ದರೆ ಶಿಕ್ಷೆ ಆಗಲಿದೆ. ಆದರೆ, ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಮತ್ತೊಂದು ನ್ಯಾಯ ಮಾಡಲು ಇವರಿಗೆ ಅಧಿಕಾರ ಕೊಟ್ಟಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ತಮ್ಮದು ಕಳಂಕರಹಿತ ಆಡಳಿತ ಎಂದು ತೀರ್ಪು ಕೊಟ್ಟುಕೊಳ್ಳುತ್ತಾರೆ. ಅವರೇ ಜಡ್ಜ್, ಅವರೇ ಲಾಯರ್ ಎಂದು ತಿಳಿಸಿದರು. ಮುಖ್ಯಮಂತ್ರಿಯವರೇ, ನಿಮ್ಮದು ಕಳಂಕರಹಿತ ಆಡಳಿತ ಅಲ್ಲ ಎನ್ನಲು ನಮ್ಮ ಹತ್ತಿರ ಸಾಕಷ್ಟು ಸಾಕ್ಷಿಗಳಿವೆ ಎಂದು ಸವಾಲೆಸೆದರು.