ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಬಿಜೆಪಿ ಶಾಸಕ ಸಿಟಿ ರವಿ ಕಿಡಿ ಕಾರಿದ್ದಾರೆ. ಕಾಮೆಂಟ್ ಗಳಿಗೆ ಹತ್ಯೆ ಮಾಡುವುದಿದ್ದರೆ ರಾಜಕಾರಣಿಗಳು ದಿನಕ್ಕೊಂದು ಹತ್ಯೆ ಮಾಡಬೇಕಾದೀತು ಎಂದಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿ ಮುಚ್ಚಿದ ಪರದೆಯೊಳಗೆ ವಿಚಾರಣೆ ನಡೆಸುತ್ತಿರುವ ಪೊಲೀಸರ ಕ್ರಮವನ್ನೂ ಟೀಕಿಸಿದ್ದಾರೆ.
ದರ್ಶನ್ ಪ್ರಕರಣದಲ್ಲಿ ಪೊಲೀಸ್ ಠಾಣೆ ಸುತ್ತ ಶಾಮಿಯಾನ ಹಾಕಿ, 144ನೇ ಸೆಕ್ಷನ್ ವಿಧಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಪೊಲೀಸ್ ಇಲಾಖೆ ಮೇಲಿನ ಸಾರ್ವಜನಿಕರ ನಂಬಿಕೆಗೆ ಚ್ಯುತಿ ತರುವಂತಿದೆ. ದರ್ಶನ್ ಪ್ರಕರಣ, ರೇಣುಕಸ್ವಾಮಿ ಹತ್ಯೆ ಗಮನಿಸಿದರೆ, ಇಂಥ ಕಾಮೆಂಟ್‍ಗಳಿಗೆ ಹತ್ಯೆ ಮಾಡುವುದಾದರೆ ರಾಜಕಾರಣಿಗಳು ದಿನಕ್ಕೊಂದು ಹತ್ಯೆ ಮಾಡಬೇಕಾದೀತು ಎಂದು ಉತ್ತರ ಕೊಟ್ಟರು. ಇಂಥ ಕಾಮೆಂಟ್ ದಿನವೂ ಬರುತ್ತದೆ. ಸೋಷಿಯಲ್ ಮೀಡಿಯದಲ್ಲಿ ಅವ್ವ, ಹೆಂಡತಿ, ಅಜ್ಜಿ, ಮುತ್ತಜ್ಜಿ ವರೆಗೂ ಮಾತನಾಡಿದವರಿದ್ದಾರೆ. ಈ ಹತ್ಯೆ ಮನುಕುಲ ತಲೆ ತಗ್ಗಿಸುವ ವಿಚಾರ ಎಂದು ನುಡಿದರು.
ನಿನ್ನೆಯೂ ಕರ್ನಾಟಕ ಬಿಜೆಪಿ ಘಟಕ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿರುವುದನ್ನು ಪ್ರಶ್ನೆ ಮಾಡಿತ್ತು. ಈ ರೀತಿ ತೆರೆಮರೆಯಲ್ಲಿ ತನಿಖೆ ನಡೆಸಬೇಕಾದ ಅಗತ್ಯವೇನಿದೆ ಎಂದು ಟೀಕಿಸಿತ್ತು.