ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ನಡೆದ ಶೆಡ್ ನಲ್ಲಿ ದರ್ಶನ್ ಕೂಡಾ ಇದ್ದರು ಎನ್ನುವುದಕ್ಕೆ ಪೊಲೀಸರು ಸಾಕ್ಷ್ಯ ಕಲೆ ಹಾಕಿದ್ದಾರೆ. ದರ್ಶನ್ ಮತ್ತು ಪವಿತ್ರಾ ಗೌಡ ಇದ್ದಿದ್ದರು ಎಂಬ ಸಾಕ್ಷ್ಯ ಕಲೆ ಹಾಕಿರುವ ಪೊಲೀಸರು ಕೇಸ್ ಇನ್ನಷ್ಟು ಸ್ಟ್ರಾಂಗ್ ಮಾಡಿದ್ದಾರೆ.
ಹತ್ಯೆ ನಡೆದಾಗ ನಾನು ಸ್ಥಳದಲ್ಲಿರಲಿಲ್ಲ. ನಾನೇನು ಮಾಡಿಲ್ಲ ಎಂದು ಹೇಳುತ್ತಿದ್ದ ದರ್ಶನ್ ವಿರುದ್ಧ ಪೊಲೀಸರು ಬಲವಾದ ಸಾಕ್ಷಿ ಕಲೆ ಹಾಕಿದ್ದಾರೆ. ಘಟನೆ ವೇಳೆ ದರ್ಶನ್, ಪವಿತ್ರಾ ಗೌಡ, ನವೀನ್ ಸೇರಿದಂತೆ ಪ್ರಮುಖ ಆರೋಪಿಗಳ ಮೊಬೈಲ್ ಇತ್ತು ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ. ಹತ್ಯೆ ನಡೆಸಿದ ಬಳಿಕ ಆರೋಪಿಗಳು ಪೊಲೀಸ್ ಅಧಿಕಾರಿಯೊಬ್ಬರ ಜೊತೆ ನಡೆಸಿದ ಮಾತುಕತೆಯ ವಿವರ ಲಭ್ಯವಾಗಿದೆ.
ಸರೆಂಡರ್ ಆಗುವುದಕ್ಕೆಂದು ಸಹಾಯಕರಿಗೆ ದರ್ಶನ್ ನೀಡಿದ್ದ ಹಣವನ್ನು ಜಪ್ತಿ ಮಾಡಲಾಗಿದೆ. ಕೃತ್ಯದ ಬಳಿಕ ಆರೋಪಿಗಳು ದರ್ಶನ್ ಗೆ ಪದೇ ಪದೇ ಕಾಲ್ ಮಾಡಿದ್ದ ವಿವರ ಲಭ್ಯವಾಗಿದೆ. ಅಲ್ಲದೆ, ಆರೋಪಿಗಳು ನೀಡಿದ ಹೇಳಿಕೆಯಂತೆ ದರ್ಶನ್ ಹೇಳಿದ್ದಕ್ಕೇ ರೇಣುಕಾಸ್ವಾಮಿಯನ್ನು ಕರೆತಂದು ಹಲ್ಲೆ ನಡೆಸಲಾಗಿದೆ ಎನ್ನುವುದು ಪಕ್ಕಾ ಆಗಿದೆ.
ಈ ಎಲ್ಲಾ ಸಾಕ್ಷ್ಯಗಳು ಈಗ ದರ್ಶನ್ ವಿರುದ್ಧ ಬಲವಾದ ಸಾಕ್ಷ್ಯ ನೀಡುತ್ತಿದೆ. ಒಂದು ವೇಳೆ ಹತ್ಯೆಯಾದ ಸಂದರ್ಭದಲ್ಲಿ ದರ್ಶನ್ ಸ್ಥಳದಲ್ಲಿ ಇಲ್ಲದೇ ಇದ್ದರೂ ಅವರ ಪಾತ್ರ ಈ ಪ್ರಕರಣದಲ್ಲಿ ದೊಡ್ಡದಾಗಿದೆ ಎನ್ನುವುದು ಸ್ಪಷ್ಟವಾಗಿದೆ.