ಹಾಸನ: ಸಿಎಂ ಆಗಬೇಕೆಂದುಕೊಂಡಿರುವ ಡಿಕೆ ಶಿವಕುಮಾರ್ ಹಾಸನಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದು ಈ ವೇಳೆ ದೇವಿ ವಿಶೇಷ ಸೂಚನೆ ನೀಡಿದ್ದಾಳೆ.
ರಾಜ್ಯದಲ್ಲಿ ಈಗ ಸಿಎಂ ಬದಲಾವಣೆ ಮತ್ತು ಸಂಪುಟ ಪುನರಾಚನೆ ಕಸರತ್ತು ನಡೆಯುತ್ತಿರುವಾಗಲೇ ಹಾಸನಾಂಬೆಗೆ ಡಿಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಾಲಯಕ್ಕೆ ಪತ್ನಿ ಜೊತೆ ತೆರಳಿದ ಡಿಕೆ ಶಿವಕುಮಾರ್ ವಿಜಯೀ ಶ್ರೇಯಸ್ಸು ಸಿಗಲಿ ಎಂದು ನಾರಾಯಣಿ ನಮಸ್ಕಾರ ಮಂತ್ರದ ಪೂಜೆ ನಡೆಸಿದರು.
ಪೂಜೆ ವೇಳೆ ಡಿಕೆ ಶಿಗೆ ಶತ್ರುವಿನ ಮೇಲೆ ವಿಜಯ ಸಾಧಿಸುವ ಖಡ್ಗಮಾಲ ಸ್ತೋತ್ರ ಪಠಿಸಿದರು. ಈ ಪೂಜೆ ವೇಳೆ ದೇವಿಯ ಬಲಭಾಗದಿಂದ ಹೂ ಬಿದ್ದಿದೆ. ಇದು ಶುಭ ಸೂಚನೆಯಾಗಿದೆ.
ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಹಾಸನದ ಅಧಿದೇವತೆ ಹಾಗೂ ಶಕ್ತಿ ಪೀಠಗಳಲ್ಲಿ ಒಂದಾದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹಾಸನಾಂಬ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ತಾಯಿ ಹಾಸನಾಂಬೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವುದರ ಜೊತೆಗೆ ಹಲವು ಪವಾಡಗಳನ್ನು ಮಾಡುವ ಮೂಲಕ ಭಕ್ತರ ಹೃದಯಗಳಲ್ಲಿ ವಿಶೇಷ ಸ್ಥಾನ ಪಡೆದಿದ್ದಾಳೆ. ತಾಯಿ ಸನ್ನಿಧಿಯಲ್ಲಿ ನಾಡನ್ನು ಸಮೃದ್ಧವಾಗಿರಿಸು ಎಂದು ಪ್ರಾರ್ಥನೆ ಸಲ್ಲಿಸಿದೆ ಎಂದಿದ್ದಾರೆ.