ಬೆಂಗಳೂರು: ಅಂಜನಾದ್ರಿ ಬೆಟ್ಟದ ಬಳಿ ವಿದ್ಯುತ್ ದೀಪಗಳು ತ್ರಿಶೂಲ-ತಿಲಕದ ಆಕಾರದಲ್ಲಿರುವುದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಬರುತ್ತಿದೆ ಎಂದು ತೆಗೆಸಿದ್ದ ಜಿಲ್ಲಾಡಳಿತದ ವಿರುದ್ಧ ಶಾಸಕ ಸಿಟಿ ರವಿ ಗರಂ ಆಗಿದ್ದಾರೆ.
ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಬಳಿ ವಿದ್ಯುತ್ ದೀಪಗಳಿಗೆ ತ್ರಿಶೂಲ, ತಿಲಕದ ನಾಮದ ಆಕಾರವಿದ್ದರೆ ಅದು ಧಾರ್ಮಿಕ ಭಾವನೆಗೆ ಅಡ್ಡಿ. ಅದೇ ದಿನ ಬೆಳಗಾದರೆ ಊರಿಗಿಡೀ ಕೇಳುವಂತೆ ಮೈಕ್ ಹಾಕಿ ಕಿರುಚಾಡಿ ತೊಂದರೆ ಮಾಡಿದರೆ ಧಕ್ಕೆಯಾಗುವುದಿಲ್ಲವೇ ಎಂದು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಅಂಜನಾದ್ರಿ ಬೆಟ್ಟದ ಸಮೀಪದ ವಿದ್ಯುತ್ ದೀಪಗಳಿಗೆ ತ್ರಿಶೂಲ, ತಿಲಕದ ಆಕಾರವಿರುವುದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂದು ತಹಶೀಲ್ದಾರ್ ಇಂತಹ ದೀಪಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರು. ಇದೀಗ ಆ ತಹಶೀಲ್ದಾರ್ ರನ್ನು ಅಮಾನತ್ತುಗೊಳಿಸುವಂತೆ ಸಿಟಿ ರವಿ ಆಗ್ರಹಿಸಿದ್ದಾರೆ.
ಹಿಂದೂ ವಿರೋಧಿ ನಿರ್ಣಯ ಕೈಗೊಂಡಿರುವ ಗಂಗಾವತಿಯ ತಹಶೀಲ್ದಾರ್ ನನ್ನು ತಕ್ಷಣವೇ ಅಮಾನತು ಮಾಡಬೇಕು. ಇಲ್ಲದೇ ಹೋದರೆ ಗಂಗಾವತಿಗೆ ನಾವೇ ಬಂದು ವಿದ್ಯುತ್ ದೀಪ ಅಳವಡಿಸಬೇಕಾಗುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಿಟಿ ರವಿ ಎಚ್ಚರಿಕೆ ನೀಡಿದ್ದಾರೆ.