ರಾಜ್ಯದ ಬೇಹುಗಾರಿಕಾ ದಳ ಕೋಮಾ ಸ್ಥಿತಿಗೆ ತಲುಪಿದೆಯೇ: ಸಿ.ಟಿ.ರವಿ

Krishnaveni K

ಗುರುವಾರ, 10 ಜುಲೈ 2025 (17:22 IST)
ಬೆಂಗಳೂರು:  ರಾಜ್ಯದ ಬೇಹುಗಾರಿಕಾ ದಳ ಕೋಮಾ ಸ್ಥಿತಿಗೆ ತಲುಪಿದೆಯೇ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು  ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನದ’ಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ್ಳೆಯ ಕಾರಣಕ್ಕೆ ಕರ್ನಾಟಕ ಸುದ್ದಿ ಆಗುತ್ತಿಲ್ಲ. ಗ್ಯಾಂಗ್ ರೇಪ್, ಕಾಲ್ತುಳಿತ, ಆತ್ಮಹತ್ಯೆ, ಕೊಲೆಯಂಥ ಕಾರಣಕ್ಕೆ ಕರ್ನಾಟಕ ಸುದ್ದಿ ಆಗುವುದು ಒಳ್ಳೆಯ ಸಂಗತಿಯಲ್ಲ. ಈ ಸರಕಾರ, ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಆಡಳಿತ ನಡೆಸಲು ಆಗದೆ ಇದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದು ಆಗ್ರಹಿಸಿದರು. ನಿಮ್ಮಿಂದ ರಾಜ್ಯ- ದೇಶ ಹಾಳಾಗುವುದು ಬೇಡ ಎಂದು ತಿಳಿಸಿದರು.
 
3 ತಿಂಗಳಲ್ಲಿ 340 ಅತ್ಯಾಚಾರ ಪ್ರಕರಣ ಆಗಿದೆ. ಇದೇನು ಒಳ್ಳೆಯ ಸುದ್ದಿಯೇ? ಭ್ರಷ್ಟಾಚಾರ, ಬೆಲೆ ಏರಿಕೆ, ಅತ್ಯಾಚಾರ, ಹತ್ಯೆ, ಉಗ್ರ ಚಟುವಟಿಕೆಗೆ ರಾಜ್ಯ ಸರಕಾರ ಸುದ್ದಿ ಆಗುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.
 
ಎರಡು ದಿನಗಳ ಹಿಂದೆ ಮಂಗಳವಾರ ಎನ್‍ಐಎ ರಾಜ್ಯದ ಎರಡು ಕಡೆಗಳಲ್ಲಿ ದಾಳಿ ಮಾಡಿದೆ. ಜೀವಾವಧಿ ಶಿಕ್ಷೆಗೆ ಒಳಗಾದ ಮೂವರನ್ನು ಬಂಧಿಸಿದೆ. ಅದರಲ್ಲಿ ಮನೋವೈದ್ಯ ಡಾ|| ನಾಗರಾಜ್, ಎಎಸ್‍ಐ ಚಾಂದ್ ಭಾಷಾ, ಮತ್ತೊಬ್ಬರು ಪರಾರಿಯಾದ ಶಂಕಿತ ಉಗ್ರ ಜುನೈದ್ ಅಹ್ಮದ್‍ನ ತಾಯಿ ಅನೀಸ್ ಫಾತಿಮಾ ಬಂಧಿತರು. ಎನ್‍ಐಎಗೆ ರಾಜ್ಯದ ಮಾಹಿತಿ ಸಿಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿವೆ. ರಾಷ್ಟ್ರವಿರೋಧಿ, ರಾಷ್ಟ್ರಘಾತುಕ ವ್ಯವಸ್ಥೆ ತಯಾರಾದ ಮಾಹಿತಿ ಎನ್‍ಐಎಗೆ ಸಿಗುತ್ತದೆ. ನಮ್ಮ ಬೇಹುಗಾರಿಕಾ ದಳಕ್ಕೆ (ಇಂಟೆಲಿಜೆನ್ಸ್) ಯಾಕೆ ಈ ಮಾಹಿತಿ ಸಿಗುತ್ತಿಲ್ಲ? ಎಂದು ಕೇಳಿದರು.
 
ಜೈಲೆಂಬ ಸೂಪರ್ ಮಾರ್ಕೆಟ್..
ನಮ್ಮ ಬೇಹುಗಾರಿಕಾ ದಳಕ್ಕೆ ಜನರು ಸೇರುವುದೂ ಗೊತ್ತಾಗುವುದಿಲ್ಲ; ಜನರು ಸಾಯುವುದೂ ಅವರ ಗಮನಕ್ಕೆ ಬರುವುದಿಲ್ಲ ಎಂಬುದು ದುರ್ದೈವದ ಸಂಗತಿ ಎಂದು ಸಿ.ಟಿ. ರವಿ ಅವರು ತಿಳಿಸಿದರು.
ಜೈಲನ್ನೇ ಒಂಥರ ಸೂಪರ್ ಮಾರ್ಕೆಟ್ ಮಾಡಿಕೊಂಡಿದ್ದಾರೆ. ಜೈಲಿನಲ್ಲಿ ಎಲ್ಲವೂ ಸಿಗುತ್ತಿದೆ ಎಂಬುದು ರಕ್ಷಣಾ ಕ್ಷೇತ್ರದ ವೈಫಲ್ಯಕ್ಕೆ ನಿದರ್ಶನ. ರನ್ಯಾ ರಾವ್ ಪ್ರಕರಣದ ಬಳಿಕ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶ ಮಾಡುವವರನ್ನು ಕಡ್ಡಾಯ ತಪಾಸಣೆ ಮಾಡಬೇಕು ಎಂಬುದು ಗೊತ್ತಿದ್ದು ಕೂಡ, ಆ ವೈದ್ಯ ಡಾ. ನಾಗರಾಜ್‍ರನ್ನು ಯಾಕೆ ನಿರಂತರ ತಪಾಸಣೆ ಮಾಡುತ್ತಿರಲಿಲ್ಲ ಎಂದು ಪ್ರಶ್ನೆ ಮಾಡಿದರು.
 
ರಾಜ್ಯದ ಇಂಟೆಲಿಜೆನ್ಸ್ ವಿಭಾಗಕ್ಕೆ ಇವೆಲ್ಲ ಗೊತ್ತಿದ್ದು ಗೊತ್ತಿಲ್ಲದಂತೆ ಇರುವ ಅನಿವಾರ್ಯತೆ ಸೃಷ್ಟಿ ಆಗಿದೆಯೇ? ನಾಸೀರ್ ಎಲ್‍ಇಟಿ ಉಗ್ರ. ಅವನ ಮೇಲಿನ ಆರೋಪ ಸಾಬೀತಾಗಿದೆ. ಅಂಥ ಉಗ್ರನಿಗೆ ಎಲ್ಲ ನೆರವು ನಮ್ಮ ಜೈಲಿನಲ್ಲಿ ಸಿಗುತ್ತದೆ. ರಾಜ್ಯ ಮತ್ತು ದೇಶವನ್ನು ಹೇಗೆ ಬೇಕಾದರೂ ಬಳಸಲು ನಾವೇ ಅವಕಾಶ ಕೊಡುತ್ತಿದ್ದೇವಾ ಎಂದು ಪ್ರಶ್ನೆಯನ್ನು ಮುಂದಿಟ್ಟರು.
 
ಬಂಧಿತರಲ್ಲದೆ ಇನ್ನೂ ಕೆಲವು ಜೈಲು ಸಿಬ್ಬಂದಿಗಳು ಈ ಥರದ ಚಟುವಟಿಕೆಗಳಲ್ಲಿ ಭಾಗವಹಿಸಿದ ಸಾಧ್ಯತೆ ಇದೆ. ಸಮಾಜಘಾತುಕರು ಹೊರಗೆ ಕೇಂದ್ರ ಸ್ಥಾನ ಇಟ್ಟುಕೊಂಡ ಹಲವು ಪ್ರಕರಣ ಅನುಭವಕ್ಕೆ ಬಂದಿತ್ತು. ಆದರೆ, ಜೈಲನ್ನೇ ಕೇಂದ್ರವಾಗಿ ಇಟ್ಟುಕೊಂಡು ಸಮಾಜಘಾತುಕ ಚಟುವಟಿಕೆ ಮಾಡುವುದು, ಜೈಲಿನ ಮೂಲಕವೇ ಸಂಚು ರೂಪಿಸುವುದು, ಜೈಲಿನ ಮೂಲಕವೇ ನಿರ್ದೇಶನ ಕೊಡುವುದು, ಅಲ್ಲಿಂದಲೇ ನಿಯಂತ್ರಣ ಮಾಡುವುದು ಜೈಲಿನ ಅಧಿಕಾರಿಗಳು, ಇಂಟೆಲಿಜೆನ್ಸ್ ಅಧಿಕಾರಿಗಳಿಗೆ ಗೊತ್ತಿಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ಅನಿಸುತ್ತದೆ ಎಂದು ನುಡಿದರು.
 
ರೇಟ್ ಕಾರ್ಡ್ ಆಧಾರದಲ್ಲಿ ಹುದ್ದೆ..
ಆಂತರಿಕ ರಕ್ಷಣಾ ವಿಭಾಗ (ಐಎಸ್‍ಡಿ) ತೆರೆಯಲಾಗಿದೆ. ಅಲ್ಲಿ ದಕ್ಷ ಅಧಿಕಾರಿಗಳು ಇರಬೇಕಿತ್ತು. ಆದರೆ, ಅಲ್ಲಿ ಶಿಕ್ಷೆಗೊಳಗಾದವರ ವರ್ಗಾವಣೆಯ ಕೇಂದ್ರವಾಗಿದೆ. ದಕ್ಷ ಅಧಿಕಾರಿಗಳಿಗೆ ಸೂಕ್ತ ಸ್ಥಳ ಸಿಗುತ್ತಿಲ್ಲ. ಈ ಸರಕಾರದಲ್ಲಿ ರೇಟ್ ಕಾರ್ಡ್ ಆಧಾರದಲ್ಲಿ, ಹಣ ಕೊಟ್ಟವರಿಗೆ ಪ್ರಮುಖ ಹುದ್ದೆ ಸಿಗುವ ಕಾರಣ ಸರಕಾರಿ ಬೇಹುಗಾರಿಕಾ ವ್ಯವಸ್ಥೆ, ಐಎಸ್‍ಡಿ ವಿಫಲವಾಗಿದೆ ಎಂದು ಸಿ.ಟಿ.ರವಿ ಅವರು ಆಕ್ಷೇಪಿಸಿದರು.
 
ಮುಖ್ಯಮಂತ್ರಿಗಳನ್ನು ಕೇಳಿದರೆ ಎಲ್ಲವೂ ಗೊತ್ತಿದೆ ಎನ್ನುತ್ತಾರೆ; ಗೃಹ ಸಚಿವರು ಬೆಳಗಾವಿ, ಮಂಗಳೂರು ಸೇರಿ ಯಾವುದೇ ಪ್ರಕರಣದ ಕುರಿತು ಕೇಳಿದರೂ ನನಗೇನೂ ಗೊತ್ತಿಲ್ಲ ಎಂದು ಹೇಳುತ್ತಾರೆ. ಉಪ ಮುಖ್ಯಮಂತ್ರಿಗಳನ್ನು ಕೇಳಿದರೆ ನಟ್ ಬೋಲ್ಟ್ ಟೈಟ್ ಮಾಡುವುದಾಗಿ ಹೇಳುತ್ತಾರೆ. ಸಿಎಂ ಎಂದರೆ ಭೂತ, ವರ್ತಮಾನ, ಭವಿಷ್ಯ ಎಲ್ಲವೂ ಗೊತ್ತಿರುವ ಸರ್ವಜ್ಞ. ಈ ಸ್ಥಿತಿಯಲ್ಲಿ ನಮ್ಮ ಇಂಟೆಲಿಜೆನ್ಸ್‍ಗೆ ಏನಾಗಿದೆ ಎಂದು ಕೇಳಿದರು.
 
ಭಯೋತ್ಪಾದಕತೆ ಬಗ್ಗೆ ಕಾಂಗ್ರೆಸ್ ಪಕ್ಷ ಮತ್ತು ಈ ಸರಕಾರಕ್ಕೆ ಗಂಭೀರತೆ ಇಲ್ಲ ಅನಿಸುತ್ತದೆ. ಭಯೋತ್ಪಾದಕ ಪ್ರಕರಣಗಳನ್ನೂ ಗಂಭೀರವಲ್ಲದ ಪ್ರಕರಣ ಎಂದು ನೋಡುವ ಮಾನಸಿಕತೆ ಇದೆಯೇನೋ ಎಂಬ ಅನುಮಾನ ಮೂಡುವಂತಾಗಿದೆ. ಕುಕ್ಕರ್ ಬಾಂಬ್ ಸ್ಫೋಟ ಇವರಿಗೆ ಗಂಭೀರ ವಿಷಯವಲ್ಲ; ರಾಮೇಶ್ವರ ಕೆಫೆಯ ಬಾಂಬ್ ಸ್ಫೋಟವನ್ನು ಆಂತರಿಕ ಕಲಹ ಎಂಬಂತೆ ತನಿಖೆಗೂ ಮೊದಲೇ ತಿಳಿಸಿದ್ದರು. ಅದು ಸಿಲಿಂಡರ್ ಸ್ಫೋಟ ಎಂದು ಇನ್ನೊಬ್ಬರು ಹೇಳಿದ್ದರು. ಜೀವಾವಧಿ ಕೈದಿಗೆ ಮೊಬೈಲ್, ಎಲ್ಲ ವಸ್ತು ಸಿಗುತ್ತಿದೆ. ಇವರು ರಾಜಕೀಯ ಚಟುವಟಿಕೆಗಳನ್ನು ಟೂರಿಂಗ್ ಟೆಂಟ್ ಮಾಡುತ್ತಿದ್ದಾರೆ. ಮೈಸೂರು, ಬೆಂಗಳೂರು, ದೆಹಲಿ, ಕಲಬುರ್ಗಿಗೆ ಟೆಂಟ್ ವರ್ಗಾವಣೆ ಆಗುತ್ತಿದೆ. ಆಡಳಿತ ಕುಸಿದಿದೆ; ಇಂಟೆಲಿಜೆನ್ಸ್ ವಿಭಾಗಕ್ಕೆ ಯಾರಿಗೆ ಹೇಳಬೇಕೆಂದು ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.
 
ಜನ ಸತ್ತಾಗ ಮಸಾಲೆ ದೋಸೆ ತಿಂತಿರ್ತಾರೆ..
ಕೆಲವು ಸತ್ಯ ಹೇಳಿದರೆ ಇವರಿಗೆ ಸಂಕಟ ಆಗುತ್ತದೆ. ಜನ ಸತ್ತಾಗ ಮಸಾಲೆ ದೋಸೆ ತಿಂತಿರ್ತಾರೆ. ಒಂದೋ ಮಾನವೀಯತೆ ಕಳಕೊಂಡಿದ್ದಾರೆ. ಇಲ್ಲವೇ ನಮಗೇನೂ ಸಂಬಂಧ ಇಲ್ಲ ಎಂಬ ಮನಸ್ಥಿತಿಗೆ ಬಂದು ಬಿಟ್ಟಿದ್ದಾರೆ ಎಂದು ಸಿ.ಟಿ.ರವಿ ಅವರು ಪ್ರಶ್ನೆಗೆ ಉತ್ತರಿಸಿದರು.
 
ಡಿ.ಕೆ.ಸುರೇಶ್, ಚನ್ನಗಿರಿ ಶಾಸಕ ಸೇರಿ ಹಲವರು ಮುಖ್ಯಮಂತ್ರಿಯಿಂದ ಅಧಿಕಾರ ಹಸ್ತಾಂತರದ ಪ್ರಶ್ನೆ ಎತ್ತಿದ್ದಾರೆ. ಈ ಪ್ರಶ್ನೆ ಬಿಜೆಪಿ ಎತ್ತಿರಲಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ದೇಶಪಾಂಡೆಯವರು ಬಿಜೆಪಿಯವರೇ? ಇಕ್ಬಾಲ್ ಹುಸೇನ್ ಬಿಜೆಪಿ ಶಾಸಕರೇ? ಎಂದು ಕೇಳಿದರು. ಇವರಿಗೆ ಒಳ್ಳೆಯ ಆಡಳಿತ ಕೊಡಲು ಅಧಿಕಾರ ಕೊಟ್ಟಿದ್ದಾರೆ. ಬೆಲೆ ಏರಿಕೆ, ಭ್ರಷ್ಟಾಚಾರ ಮಾಡಲೆಂದು ಅಲ್ಲ; ಇದನ್ನು ನಾವು ಹೇಳುತ್ತಿದ್ದೇವೆ ಎಂದು ತಿಳಿಸಿದರು.
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ