ಡಿಸಿಎಂ ಪರಮೇಶ್ವರ್ ಜೀರೋ ಟ್ರಾಫಿಕ್ ದರ್ಬಾರ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾದ್ಯಮಗಳ ಮೇಲೇ ಕಿಡಿ
ಗುರುವಾರ, 27 ಸೆಪ್ಟಂಬರ್ 2018 (09:38 IST)
ಬೆಂಗಳೂರು: ತಾವು ಸಂಚಾರ ಮಾಡುವಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದರ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳ ಮೇಲೆ ಡಿಸಿಎಂ ಪರಮೇಶ್ವರ್ ಕಿಡಿ ಕಾರಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಜನ ನಿಬಿಡ ರಸ್ತೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದಾಗ ಸಂಚಾರ ಸ್ಥಗಿತಗೊಳಿಸಿ (ಜೀರೋ ಟ್ರಾಫಿಕ್) ಡಿಸಿಎಂ ಪರಮೇಶ್ವರ್ ವಾಹನ ಹೋಗಲು ಪೊಲೀಸರು ವ್ಯವಸ್ಥೆ ಮಾಡಿದ್ದನ್ನು ಖಾಸಗಿ ವಾಹಿನಿಗಳು ವರದಿ ಮಾಡಿ ಪ್ರಶ್ನೆ ಮಾಡಿದ್ದವು.
ಡಿಸಿಎಂ ಪರಮೇಶ್ವರ್ ಅವರ ಈ ಖಯಾಲಿಯಿಂದ ಹಲವರಿಗೆ ತೊಂದರೆಯಾಗುತ್ತಿದೆ ಎಂದು ಮಾಧ್ಯಮಗಳು ಆರೋಪಿಸಿದ್ದವು. ಅದೇ ಪ್ರಶ್ನೆಯನ್ನು ಕಾರ್ಯಕ್ರಮವೊಂದಕ್ಕೆ ಬಂದಿದ್ದ ಡಿಸಿಎಂ ಪರಮೇಶ್ವರ್ ಬಳಿ ಕೇಳಿದಾಗ ‘ನನಗೆ ಇರುವ ಅವಕಾಶ ಬಳಸಿಕೊಳ್ಳುತ್ತಿದ್ದೇನೆ. ಅದರಿಂದ ನಿಮಗೇಕೆ ಹೊಟ್ಟೆ ಉರಿ? ಹಿಂದಿನ ಗೃಹ ಸಚಿವರು ಈ ವ್ಯವಸ್ಥೆ ಬೇಡ ಎಂದಿದ್ದರು. ಆದರೆ ನಾನು ಬಳಸಿಕೊಳ್ಳುತ್ತಿದ್ದೇನೆ’ ಎಂದು ಉದ್ಧಟತನದಿಂದ ಉತ್ತರಿಸಿದ್ದಾರೆ.
ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವರು ‘ಜೀರೋ ಟ್ರಾಫಿಕ್ ನಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿರುವುದಕ್ಕೆ ವಿಷಾಧಿಸುತ್ತೇನೆ. ಪ್ರತಿ ನಿತ್ಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗುವುದರಿಂದ ಸಮಯ ಪಾಲನೆ ಅಗತ್ಯ. ಸಾಧ್ಯವಾದಷ್ಟು ಟ್ರಾಫಿಕ್ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದ್ದೇನೆ’ ಎಂದು ಸಮಜಾಯಿಷಿ ನೀಡಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.