ಶವವನ್ನು ಮನೆಯಲ್ಲಿಟ್ಟುಕೊಂಡು ಕೋಮಾದಲ್ಲಿದ್ದ ಎಂದುಕೊಂಡಿದ್ದ ಪತ್ನಿ

ಶನಿವಾರ, 24 ಸೆಪ್ಟಂಬರ್ 2022 (15:58 IST)

2021ರ ಏಪ್ರಿಲ್​ 22ರಂದು ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಕಾನ್ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದರು ಎಂದು ಮರಣ ಪ್ರಮಾಣ ಪತ್ರದಲ್ಲಿ ನಮೂದಿಸಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವಿಮಲೇಶ್​ ದೀಕ್ಷಿತ್​ ಕಳೆದ ವರ್ಷದ ಏಪ್ರಿಲ್​ನಲ್ಲಿ ನಿಧನರಾದರು. ಆದರೆ ಅವರಿನ್ನೂ ಕೋಮಾದಲ್ಲಿಯೇ ಇದ್ದರು ಎಂದು ನಂಬಿಕೊಂಡಿದ್ದ ಕುಟುಂಬಸ್ಥರು ವಿಮಲೇಶ್​ರ ಅಂತಿಮ ವಿಧಿ ವಿಧಾನವನ್ನು ಮಾಡಲು ಇಚ್ಛಿಸಲಿಲ್ಲ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಅಲೋಕ್​ ರಂಜನ್​ ಹೇಳಿದ್ದಾರೆ.

ಈ ಬಗ್ಗೆ ಕಾನ್ಪುರದ ಆದಾಯ ತೆರಿಗೆ ಅಧಿಕಾರಿಗಳು ನನಗೆ ಮಾಹಿತಿ ನೀಡಿದರು. ಅವರ ಕುಟುಂಬದ ಪಿಂಚಣಿ ಫೈಲ್​ಗಳು ಒಂದಿಂಚೂ ಚಲಿಸದ ಕಾರಣ ಈ ಬಗ್ಗೆ ತನಿಖೆ ನಡೆಸುವಂತೆ ವಿನಂತಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳ ತಂಡವು ಕಾನ್ಪುರ ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್​ ಜೊತೆಯಲ್ಲಿ ದೀಕ್ಷಿತ್​​ ಮನೆಗೆ ತಲುಪಿದ ಸಂದರ್ಭದಲ್ಲಿ ಅವರ ಕುಟುಂಬಸ್ಥರು ದೀಕ್ಷಿತ್​ ಇನ್ನೂ ಜೀವಂತವಾಗಿದ್ದಾರೆ ಹಾಗೂ ಅವರು ಕೋಮಾದಲ್ಲಿದ್ದಾರೆ ಎಂದು ವಾದಿಸಿದ್ದಾರೆ ಎಂದು ಅಲೋಕ್​ ರಂಜನ್​ ತಿಳಿಸಿದ್ದಾರೆ .

ಸಾಕಷ್ಟು ಮನವೊಲಿಕೆಯ ಬಳಿಕ ಕುಟುಂಬ ಸದಸ್ಯರು ಶವವನ್ನು ಲಾಲಾ ಲಜಪತ್​ ರಾಯ್​ ಆಸ್ಪತ್ರೆಗೆ ಕೊಂಡೊಯ್ಯಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೀಕ್ಷಿತ್​ ಕುಟುಂಬಸ್ಥರು ಅವಕಾಶ ಮಾಡಿಕೊಟ್ಟರು. ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ದೀಕ್ಷಿತ್​ 18 ತಿಂಗಳ ಹಿಂದೆಯೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.ಈ ವಿಷಯವನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಲು ಮೂವರು ಸದಸ್ಯರ ತಂಡವನ್ನು ರಚಿಸಲಾಗಿದೆ ಹಾಗೂ ಸಂಶೋಧನೆಯ ವಿವರವನ್ನು ಆದಷ್ಟು ಬೇಗ ನೀಡುವಂತೆ ಸೂಚನೆ ನೀಡಲಾಗಿದೆ.

ಮೃತದೇಹ ತೀರಾ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೀಕ್ಷಿತ್ ಕೋಮಾದಲ್ಲಿದ್ದಾರೆ ಎಂದು ಅವರ ಕುಟುಂಬದವರು ತಮ್ಮ ನೆರೆಹೊರೆಯವರಿಗೂ ತಿಳಿಸಿದ್ದರು. ಅವರ ಪತ್ನಿ ಮಾನಸಿಕವಾಗಿ ಅಸ್ಥಿರವಾಗಿರುವಂತೆ ತೋರುತ್ತಿದೆ ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ