ಬೆಂಗಳೂರು : ಮಂಗಳವಾರ ರಾತ್ರಿ 11.00 ಗಂಟೆಗೆ ತನಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ತನ್ನ ಮೇಲೆ ಹಲ್ಲೆ ಹಾಗೂ ಕುಟುಂಬ ಸದಸ್ಯರ ಸಹಿತ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದು, ಇದುವರೆಗೂ ಆತನ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದನದಲ್ಲಿ ಸ್ಪೀಕರ್ ಬಳಿ ಮಾಜಿ ಸಚಿವ ಕೆ. ಗೋಪಾಲಯ್ಯ ದೂರಿದ್ದಾರೆ.
ನಗರ ಪಾಲಿಕೆಯ ಮಾಜಿ ಸದಸ್ಯ ಪದ್ಮರಾಜ್ ತನಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆಂದು ಮಾಜಿ ಸಚಿವ ಕೆ. ಗೋಪಾಲಯ್ಯ ಆರೋಪ ಮಾಡಿದ್ದಾರೆ.ಈತ ಬೆಂಗಳೂರಿನಲ್ಲಿ ಹಲವು ಅಕ್ರಮ ಕ್ಲಬ್ ಗಳನ್ನು ನಡೆಸುತ್ತಿದ್ದು, ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ತನಗೆ ಮಾತ್ರವಲ್ಲದೇ ಮಾಜಿ ಸಚಿವರಾದ ಎಸ್. ಸುರೇಶ್ ಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಆರ್ . ಅಶೋಕ್ ಅವರಿಗೂ ಸಹ ರಾತ್ರಿ ಹೊತ್ತು ಮದ್ಯಸೇವನೆ ಮಾಡಿ ಕರೆ ಮಾಡಿ ಕಿರುಕುಳ ನೀಡಿದ್ದಾನೆ. ಈತನನ್ನು ಕೂಡಲೇ ಬಂಧಿಸಿ ಗಡೀಪಾರು ಮಾಡಬೇಕೆಂದು ಕೆ.ಗೋಪಾಲಯ್ಯ ಒತ್ತಾಯಿಸಿದರು.
ಗೋಪಾಲಯ್ಯ ಅವರ ಮಾತಿಗೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಮತ್ತು ಪ್ರತಿಪಕ್ಷನಾಯಕರಾದ ಆರ್. ಅಶೋಕ್ ಸಹ ದನಿಗೂಡಿಸಿದರು. ಒಬ್ಬ ಮಾಜಿ ಸಚಿವ, ಶಾಸಕರಿಗೇ ಈ ರೀತಿ ಬೆದರಿಕೆ ಹಾಕಿದರೆ, ಮುಂದೆ ಇಂಥ ಸ್ಥಿತಿ ಯಾವ ಶಾಸಕರಿಗೆ ಬೇಕಾದರೂ ಎದುರಾಗಬಹುದು. ಪಕ್ಷಬೇಧ ಮರೆತು ಆತನ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕರು ಆಗ್ರಹಿಸಿದರು.