ದೇವರ ಮೇಲಿಟ್ಟಿರುವ ನಂಬಿಕೆಯನ್ನು ದುರುಪಯೋಗ ಮಾಡಿಕೊಳ್ಳುವವರ ವಂಚಕರು ರಾಜಧಾನಿಯಲ್ಲಿ ದಿನೇ ದಿನೆ ಹೆಚ್ಚಾಗುತ್ತಿದ್ದಾರೆ. ದೈವದ ಕಲ್ಲು, ಅದೃಷ್ಟದ ಕಲ್ಲು ಎಂದು ಜನರನ್ನು ನಂಬಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಬಂದಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಂಚಕರಿಬ್ಬರು ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್ ಗೆ ಗಿರಾಕಿಗಳನ್ನು ಬರಮಾಡಿಕೊಂಡು ಮಾರಾಟಕ್ಕೆ ಮುಂದಾಗಿದ್ದರು. ಗುಜರಾತಿನ ಗೋಮತಿ ನದಿಯಿಂದ ತಂದಿರುವ ಬೆಲೆಬಾಳುವ ಸಾಲಿಗ್ರಾಮದ ಎರಡು ಕಲ್ಲುಗಳನ್ನು ತಂದು ವಿಷ್ಣುರೂಪದ ಅದೃಷ್ಟಕಲ್ಲು ಎಂದು ಕೋಟ್ಯಂತರ ರೂಪಾಯಿಗೆ ಬೆಲೆಬಾಳಲಿದೆ ಎಂದು ನಂಬಿಸಿ ಎರಡು ಕೋಟಿ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿವಿ ಮಹಿಳಾ ಸಂರಕ್ಷಣಾ ತಂಡ ಎಸಿಪಿ ಶಿವಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಅದೃಷ್ಟಕಲ್ಲು ಕಲ್ಲು ನಂಬಿಸಿದ್ರು.ಸಾಲಿಗ್ರಾಮದ ಕಲ್ಲುಗಳನ್ನು ವಿಷ್ಣುರೂಪದ ಪವರ್ ಪುಲ್ ಕಲ್ಲು ಎಂದು ಸಾರ್ವಜನಿಕರನ್ನು ನಂಬಿಸಲು ಕಲ್ಲಿಗೆ ಬಟ್ಟೆ ಹಾಕಿ ಪ್ರತ್ಯೇಕವಾಗಿ ಕರ್ಪೂರ ಹಾಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ವಿದರೂ ಬಟ್ಟೆ ಸುಡುವುದಿಲ್ಲ ಎಂದು ನಂಬಿಸುತ್ತಿದ್ದರು. ಅಲ್ಲದೆ ಬಟ್ಟೆ ಸುಡದ ಹಾಗೆ ಕೆಮಿಕಲ್ ಬೆರೆಸಿ ದೈವಶಕ್ತಿಯ ಕಲ್ಲೆಂದು ಬಿಂಬಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ತಂಡ ಗ್ರಾಹಕರ ಸೋಗಿನಲ್ಲಿ ಎರಡು ಕೋಟಿ ನೀಡುವುದಾಗಿ ನಂಬಿಸಿ ಅವರನ್ನ ಖೆಡ್ಡಾಕ್ಕೆ ಬೀಳಿಸಿರುವುದಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.