ಉಪಸಮಿತಿ ಸಭೆಯ ಬಳಿಕ ಬರ ಘೋಷಣೆ ಬಗ್ಗೆ ತೀರ್ಮಾನ : ಸಿಎಂ ಸಿದ್ದರಾಮಯ್ಯ

ಮಂಗಳವಾರ, 29 ಆಗಸ್ಟ್ 2023 (08:54 IST)
ಮೈಸೂರು : ರಾಜ್ಯದಲ್ಲಿ ಬರದ ಛಾಯೆಯಿರುವ ಬಗ್ಗೆ ಸಚಿವ ಸಂಪುಟ ಉಪಸಮಿತಿಯ ಸಭೆ ಇಂದು ಅಥವಾ ನಾಳೆ ನಡೆಯಲಿದೆ. ಸಭೆಯ ಬಳಿಕ ರಾಜ್ಯದಲ್ಲಿ ಬರ ಘೋಷಣೆ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
 
ಮೈಸೂರಿನ ಸರ್ಕಾರಿ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಮೋಡ ಬಿತ್ತನೆ ಇಂದಿನವರೆಗೂ ಎಲ್ಲಿಯೂ ಯಶಸ್ವಿಯಾಗಿಲ್ಲ. ಬರಗಾಲ ಘೋಷಣೆಯಾದ ಮೇಲೆ ಕೇಂದ್ರ ಸರ್ಕಾರದವರಿಗೆ ತಿಳಿಸಲಾಗುತ್ತದೆ. ಕೇಂದ್ರ ಸರ್ಕಾರ ಪರಿಶೀಲಿಸಿದ ನಂತರ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳ ಪ್ರಕಾರ ನೆರವು ನೀಡುತ್ತಾರೆ.

ಬರಗಾಲ ಎಂದು ಘೋಷಣೆಯಾದ ನಂತರ ಆ ತಾಲ್ಲೂಕುಗಳಲ್ಲಿ ಬರ ಪರಿಹಾರವಾಗಿ ಜನರಿಗೆ ಕೆಲಸ, ಮುಂತಾದ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ ಎಂದಿದ್ದಾರೆ. ಕೆ.ಆರ್.ಆಸ್ಪತ್ರೆಯಲ್ಲಿ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡುವ ಬರ್ನ್ ವಾರ್ಡ್ ಉದ್ಘಾಟನೆ ನಡೆಯಲಿದೆ. ಆ.30 ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುತ್ತದೆ.

ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ 3 ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, ನಾಲ್ಕನೇ ಗ್ಯಾರಂಟಿಯನ್ನು ಜಾರಿ ಮಾಡಲಿದ್ದೇವೆ. ಈ ಕಾರ್ಯಕ್ರಮಕ್ಕೆ ಒಂದು ಲಕ್ಷ ಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿಯವರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ