ಜೇನುಕುರುಬ-ಕೊರಗ ಜನಾಂಗದ ಅಭಿವೃದ್ಧಿ: 437.38 ಲಕ್ಷ ರೂ. ಕ್ರಿಯಾ ಯೋಜನೆಗೆ ಅನುಮೋದನೆ
ಭಾನುವಾರ, 19 ಡಿಸೆಂಬರ್ 2021 (21:10 IST)
ಪರಿಶಿಷ್ಟ ಪಂಗಡದ ಮೂಲನಿವಾಸಿ ಸಮುದಾಯಗಳಾದ ಜೇನು ಕುರುಬ ಮತ್ತು ಕೊರಗ ಸಮುದಾಯದವರ ಅಭಿವೃದ್ಧಿ ಕಾರ್ಯಕ್ರಮಗಳಿಗೆ 2021-22 ನೇ ಸಾಲಿನಲ್ಲಿ ನಿಗದಿಯಾಗಿರುವ 437.38 ಲಕ್ಷ ರೂ. ಅನುದಾನದ ಕ್ರಿಯಾ ಯೋಜನೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಅನುಮೋದನೆ ನೀಡಿದ್ದಾರೆ.
ನಗರದ ಜಿ.ಪಂ.ನ ಯೋಜನಾ ಸಮನ್ವಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೂಲನಿವಾಸಿ ಜೇನು ಕುರುಬ ಜನಾಂಗದವರ ಅಭಿವೃದ್ಧಿ ಯೋಜನೆ ಸಂಬಂಧ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಜೇನು ಕುರುಬರು ವಾಸಿಸುವ ಹಾಡಿಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಸಂಪರ್ಕ ಸೇತುವೆ ಮತ್ತಿತರ ಕಾಮಗಾರಿಗೆ 250.88 ಲಕ್ಷ ರೂ, ಕೃಷಿ ಕಾರ್ಯಗಳಿಗೆ ಸಂಬಂಧಿಸಿದಂತೆ ಡೀಸೆಲ್ ಮೋಟಾರ್ ಹಾಗೂ ಪೈಪ್‌ಗಳ ಖರೀದಿಗೆ 30 ಲಕ್ಷ ರೂ.(20 ಜನ ಫಲಾನುಭವಿಗಳಿಗೆ ತಲಾ 1.50 ಲಕ್ಷರೂ ನಂತೆ). ಜಮೀನಿಗೆ ತಂತಿ ಬೇಲಿ ಅಳವಡಿಕೆಗೆ 12.50 ಲಕ್ಷ ರೂ (50 ಜನ ಫಲಾನುಭವಿಗಳಿಗೆ ತಲಾ 25 ಸಾವಿರ ರೂ) ಸಹಾಯಧನ.
ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದಂತೆ ಅಂಗಡಿ ವ್ಯಾಪಾರಕ್ಕೆ 12 ಲಕ್ಷ ರೂ (6 ಜನ ಫಲಾನುಭವಿಗಳಿಗೆ ತಲಾ 2 ಲಕ್ಷ ರೂ) ಸಹಾಯಧನ. ಸರಕು ಸಾಕಾಣಿಕೆ ವಾಹನ ಖರೀದಿಗೆ 50 ಲಕ್ಷ ರೂ.(10 ಜನ ಫಲನುಭವಿಗಳಿಗೆ ತಲಾ 5 ಲಕ್ಷ ರೂ) ಸಹಾಯಧನ. ರ‍್ಯಾಫ್ಟಿಂಗ್ ಬೋಟ್ ಮತ್ತು ಸಲಕರಣೆಗಳ ಖರೀದಿಗೆ 20 ಲಕ್ಷ ರೂ.(10 ಜನ ಫಲಾನುಭವಿಗಳಿಗೆ ತಲಾ 2 ಲಕ್ಷ ರೂ) ಸಹಾಯಧನ.
ಹಂದಿ ಸಾಕಾಣಿಕೆ 20 ಲಕ್ಷ ರೂ.(40 ಜನ ಫಲಾನುಭವಿಗಳಿಗೆ ತಲಾ 50 ಸಾವಿರ ರೂ), ಹಸು ಸಾಕಾಣ ಕೆಗೆ 24 ಲಕ್ಷ ರೂ. (20 ಜನ ಫಲಾನುಭವಿಗಳಿಗೆ ತಲಾ 1.20 ಲಕ್ಷ ರೂ.), ಆಡು/ಕುರಿ ಸಾಕಾಣ ಕೆಗೆ 18 ಲಕ್ಷ ರೂ.(30 ಜನ ಫಲಾನುಭವಿಗಳಿಗೆ ತಲಾ 60 ಸಾವಿರ ರೂ) ಸಹಾಯಧನದ ಅನುದಾನ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಐಟಿಡಿಪಿ ಇಲಾಖೆ ಅಧಿಕಾರಿ ಅವರು ಮಾಹಿತಿ ನೀಡಿದರು.
ಕೇಂದ್ರಕ್ಕೆ ಪಟ್ಟಿ:
ಪ್ರಸಕ್ತ ಸಾಲಿನಲ್ಲಿ ಮೂಲ ನಿವಾಸಿ ಜೇನುಕುರುಬ ಮತ್ತು ಕೊರಗ ಜನಾಂಗದವರ ಅಭಿವೃದ್ಧಿ ಯೋಜನೆಯಡಿ ವೈಯಕ್ತಿಕ ನೀರಾವರಿ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಕೇಂದ್ರ ಐಟಿಡಿಪಿ ಇಲಾಖಾ ಕಚೇರಿಗೆ ಕಳುಹಿಸಿಕೊಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಭತ್ತದ ಕೃಷಿಗೆ 35 ಅರ್ಜಿ: ಪರಿಶಿಷ್ಟ ಪಂಗಡ ಮೂಲ ನಿವಾಸಿ ಜನಾಂಗದವರು ಭತ್ತ ಕೃಷಿ ಮಾಡಲು ಕೋರಿ ಹೊಂದಿರುವ ಅರ್ಜಿಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಸುಮಾರು 35 ಫಲಾನುಭವಿಗಳಿಂದ ಭತ್ತ ಕೃಷಿ ಮಾಡಲು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಸಂಬಂಧ ಭತ್ತ ಕೃಷಿಗೆ ಉತ್ತೇಜನ ನೀಡಲು ಅವಕಾಶ ಮಾಡಲು ಮುಂದಾಗಲಾಗಿದೆ ಎಂದು ಐಟಿಡಿಪಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.