ಗುತ್ತಿಗೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರ ಖಂಡಿಸಿ ಆಮ್ ಆದ್ಮಿ ಪಾರ್ಟಿಯು ಬೆಂಗಳೂರಿನಾದ್ಯಂತ ನಡೆಸುತ್ತಿರುವ ಹತ್ತು ದಿನಗಳ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ, ಯಶವಂತಪುರ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಹಿ ಸಂಗ್ರಹಿಸಿ ಮೋಹನ್ ದಾಸರಿ ಮಾತನಾಡಿದರು.
ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳಿವೆ. ಸರ್ಕಾರದ ಅನುದಾನವನ್ನು ತಮ್ಮ ಜೇಬಿಗೆ ಹಾಕಿಕೊಂಡು ಶಾಸಕರು ಅಭಿವೃದ್ಧಿಯಾಗಿದ್ದಾರೆ. ತೆರಿಗೆ ಕಟ್ಟಿದ ಸಾಮಾನ್ಯ ಜನರು ಜೀವಭಯದಲ್ಲಿ ವಾಹನ ಚಾಲನೆ ಮಾಡಬೇಕಾಗಿದೆ. ಸಹಿ ಸಂಗ್ರಹಿಸಲು ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿರುವಾಗ ಜನರು ಶಾಸಕರಿಗೆ ಹಿಡಿಶಾಪ ಹಾಕುತ್ತಿರುವುದು ಕೇಳಿಸುತ್ತಿದೆ ಎಂದು ಮೋಹನ್ ದಾಸರಿ ಹೇಳಿದರು.
ರಾಜರಾಜೇಶ್ವರಿ ನಗರ ಕ್ಷೇತ್ರದ ಎಪಿಪಿ ಅಧ್ಯಕ್ಷ ಸತೀಶ್ ಗೌಡ ಮಾತನಾಡಿ, ತೆರಿಗೆ ಕಟ್ಟುವ ಜನರಿಗೆ ಸರಿಯಾದ ರಸ್ತೆಗಳನ್ನು ಪಡೆಯುವ ಸಂಪೂರ್ಣ ಹಕ್ಕು ಇದೆ. ಇವುಗಳನ್ನು ಪಡೆಯುವುದಕ್ಕಾಗಿಯೇ ಜನರ ವಾಹನ ತೆರಿಗೆ, ರಸ್ತೆ ತೆರಿಗೆ, ಆಸ್ತಿ ತೆರಿಗೆ, ಜಿಎಸ್‌ಟಿ ಮುಂತಾದವುಗಳನ್ನು ಕಟ್ಟಲಾಗುತ್ತದೆ. ರಸ್ತೆ ದುರಸ್ತಿಗಾಗಿ ಸರ್ಕಾರದ ಬೊಕ್ಕಸದಿಂದ 20 ಸಾವಿರ ಕೋಟಿ ರೂಪಾಯಿ ಖರ್ಚಾದರೂ ಗುಂಡಿಗಳು ಕಡಿಮೆಯಾಗಲಿಲ್ಲ. ದುಡ್ಡು ಕೊಳ್ಳಲು ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಿ, ಕೇವಲ ಒಂದು ತಿಂಗಳೊಳಗೆ ಕಿತ್ತುಹೋಗುವಷ್ಟು ಕಳಪೆ ಕಾಮಗಾರಿಯಾಗಿದೆ.
ಬೆಂಗಳೂರು ನಗರ ಎಪಿಐ ಉಪಾಧ್ಯಕ್ಷರಾದ ಬಿ.ಟಿ.ನಾಗಣ್ಣ, ಪಕ್ಷದ ಮುಖಂಡರಾದ ಸುರೇಶ್ ರಾಥೋಡ್, ಶಶಿಧರ್, ಸುಹಾಸಿನಿ, ಚನ್ನಕೇಶವ, ಮಂಜುನಾಥ ಸೇರಿದಂತೆ ಸ್ಥಳೀಯ ಸಂಸ್ಥೆ, ಕಾರ್ಯಕರ್ತರು ಭಾಗವಹಿಸಿದ್ದರು.