ಧರ್ಮಸ್ಥಳ ಬುರುಡೆ ರಹಸ್ಯ, ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರದ ಗುರುತು ಪತ್ತೆ

Sampriya

ಗುರುವಾರ, 25 ಸೆಪ್ಟಂಬರ್ 2025 (16:59 IST)
Photo Credit X
ಬೆಳ್ತಂಗಡಿ : ಸೆ.17 ಹಾಗೂ 18ರಂದು ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಎಸ್.ಐ.ಟಿ ನಡೆಸಿದ ಕಾರ್ಯಾಚರಣೆ ವೇಳೆ ಪತ್ತೆಯಾದ ಏಳು ಅಸ್ಥಿಪಂಜರದಲ್ಲಿ ಒಂದು ಅಸ್ಥಿಪಂಜರದ ಗುರುತನ್ನು ಪತ್ತೆಹಚ್ಚಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. 

ಎರಡನೇ ದಿನದಲ್ಲಿ ಐಡಿ ಕಾರ್ಡ್ ಮೂಲಕ ಕುಟುಂಬ ಸದಸ್ಯರನ್ನು ಪತ್ತೆಹಚ್ಚಲಾಗಿತ್ತು. ಇದೀಗ ಮತ್ತೊಬ್ಬನ ಐಡಿ ಕಾರ್ಡ್ ಮೂಲಕ ಕುಟುಂಬ ಸದಸ್ಯರನ್ನು ಎಸ್.ಐ.ಟಿ ಪತ್ತೆ ಹಚ್ಚಿ ಕಚೇರಿಗೆ ಕರೆದು ಮಾಹಿತಿ ಕಲೆ ಹಾಕಿದೆ.

2-10-2013 ರಂದು ಬೆಂಗಳೂರು ಬಾರ್ ಕೆಲಸಕ್ಕೆ ಹೋಗುತ್ತಿದ್ದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ ಬೋಜಪ್ಪ ಮತ್ತು ಚೆನ್ನಮ್ಮ ಮೂರನೇ ಮಗ ಆದಿಶೇಷ ನಾರಾಯಣ(27ವ) ಅವರ ಮೃತದೇಹದ ಅಸ್ಥಿಪಂಜರ ಎನ್ನಲಾಗಿದೆ. ಡ್ರೈವಿಂಗ್ ಲೈಸೆನ್ಸ್ ಕಾರ್ಡ್ ಮೂಲಕ  ಎಸ್.ಐ.ಟಿ ತಂಡ ಇದೀಗ ಗುರುತನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. 

ಈ ಸಂಬಂಧ ಆದಿಶೇಷನ ಕುಟುಂಬ ಸದಸ್ಯರು ಸೆ.25 ರಂದು ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಬಂದು ಡ್ರೈವಿಂಗ್ ಲೈಸೆನ್ಸ್ ಮತ್ತು ಫೋಟೋ ಮೂಲಕ ಖಚಿತ ಪಡಿಸಿಕೊಂಡು ನಾಪತ್ತೆ ಬಗ್ಗೆ ಮಾಹಿತಿ‌ ನೀಡಿದ್ದಾರೆ. 

ಮುಂದಿನ ದಿನಗಳಲ್ಲಿ ಡಿ.ಎನ್.ಎ ಮಾಡಿಸುವುದಾಗಿ ಹೇಳಿ ಕಳುಹಿಸಿದ್ದಾರೆ ಎಂದು ಆದಿಶೇಷ ಅಕ್ಕ ಪದ್ಮ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಆದಿಶೇಷ ನಾರಾಯಣ ಪದೆ ಪದೆ ಮನೆ ಬಿಟ್ಟು ಹೋಗಿತ್ತಿದ್ದ. ಈ ಹಿನ್ನೆಲೆ ಆತನ ಕುಟುಂಬದವರು ಯಾವುದೇ ದೂರನ್ನು ನೀಡಿಲ್ಲ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ