ಧರ್ಮಸ್ಥಳ ವಿರುದ್ಧ ಆರೋಪಿಸುವ ಸೌಜನ್ಯ ಮಾವ ವಿಠಲ ಗೌಡನಿಗೂ ಇದೆ ಬೇರೆಯೇ ಉದ್ದೇಶ

Krishnaveni K

ಸೋಮವಾರ, 8 ಸೆಪ್ಟಂಬರ್ 2025 (09:48 IST)
ಬೆಳ್ತಂಗಡಿ: ನನ್ನ ಸೊಸೆ ಸೌಜನ್ಯ ಸಾವಿಗೆ ಧರ್ಮಸ್ಥಳದವರೇ ಕಾರಣ ಎಂದು ಯೂ ಟ್ಯೂಬ್ ವಾಹಿನಿಗಳಲ್ಲಿ ಆರೋಪ ಮಾಡುತ್ತಿದ್ದ ಸೌಜನ್ಯ ಮಾವ ವಿಠಲ ಗೌಡನಿಗೂ ಬೇರೆಯೇ ಉದ್ದೇಶವಿತ್ತು ಎಂಬುದು ಈಗ ಎಸ್ಐಟಿ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಚಿನ್ನಯ್ಯನಿಗೆ ಬುರುಡೆ ಸರಬರಾಜು ಮಾಡಿದ್ದೇ ವಿಠಲಗೌಡ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ. ನೇತ್ರಾವತಿ ಕಾಡಿನಿಂದ ಒಂದು ವರ್ಷದ ಹಿಂದೆ ವಿಠಲ ಗೌಡ ತಲೆಬುರುಡೆ ಸಂಗ್ರಹಿಸಿ ತಂದು ಬುರುಡೆ ಗ್ಯಾಂಗ್ ಗೆ ಕೊಟ್ಟಿದ್ದ. ಇದೀಗ ಎಸ್ಐಟಿ ಅಧಿಕಾರಿಗಳು ಆತನನ್ನು ತನಿಖೆಗೊಳಪಡಿಸುತ್ತಿದ್ದಾರೆ. ಈ ವೇಳೆ ಸಾಕಷ್ಟು ಬೆಚ್ಚಿಬೀಳಿಸುವ ಅಂಶಗಳು ಹೊರಬೀಳುತ್ತಿವೆ.

ಬುರುಡೆ ಮೂಲ ಹುಡುಕಿದ ಎಸ್ಐಟಿ ಅಧಿಕಾರಿಗಳಿಗೆ ಕೊಲೆಗೀಡಾಗಿದ್ದ ಸೌಜನ್ಯ ಮಾವ ವಿಠಲ ಗೌಡ ಹೆಸರು ತಿಳಿದುಬಂದಿದೆ. ಆತನನ್ನು ತನಿಖೆಗೊಳಪಡಿಸಿದಾಗ ಬುರುಡೆ ತಾನೇ ತಂದುಕೊಟ್ಟಿದ್ದು ಎಂದು ಒಪ್ಪಿಕೊಂಡಿದ್ದಾನೆ. ಆದರೆ ಯಾಕೆ ಹೀಗೆ ಮಾಡಿದ್ದು ಎಂಬುದಕ್ಕೆ ಆತ ತನ್ನದೇ ವೈಯಕ್ತಿಕ ಕಾರಣ ನೀಡಿದ್ದಾನೆ.

ವಿಠಲ ಗೌಡಗೆ ನೇತ್ರಾವದಿ ನದಿ ಪಕ್ಕ ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಸೇರಿದ ಕಟ್ಟಡದಲ್ಲಿ ಈ ಹಿಂದೆ ಅವರು ಹೋಟೆಲ್ ಹೊಂದಿದ್ದರು. ಹಲವು ವರ್ಷಗಳ ಬಳಿಕ ಹೋಟೆಲ್ ಇದ್ದ ಕೊಠಡಿ ಕೈ ತಪ್ಪಿ ಹೋಯ್ತು. ಇದಕ್ಕೆ ಧರ್ಮಸ್ಥಳದವರೇ ಕಾರಣ ಎಂಬ ಕೋಪ ವಿಠಲ ಗೌಡರದ್ದು.

ಹೀಗಾಗಿ ಸೌಜನ್ಯ ಹೋರಾಟಗಾರರ ಜೊತೆ ಸೇರಿಕೊಂಡು ಧರ್ಮಸ್ಥಳ ವಿರುದ್ಧ ಆರೋಪ ಮಾಡುತ್ತಿದ್ದರು. ಅವರ ಜೊತೆ ಕೈ ಜೋಡಿಸಿಕೊಂಡು ಬುರುಡೆ ಸಂಗ್ರಹಿಸಿ ತಂದುಕೊಟ್ಟಿದ್ದರು. ಬುರುಡೆ ತಂದುಕೊಡಲು ಗಿರೀಶ್ ಮಟ್ಟೆಣ್ಣನವರ್ ಪ್ಲ್ಯಾನ್ ಮಾಡಿ ಸೂಚನೆ ಕೊಟ್ಟಿದ್ದರು. ಅದರಂತೆ ಒಂದು ವರ್ಷದ ಹಿಂದೆ ಬಂಗ್ಲೆಗುಡ್ಡ ಪ್ರದೇಶದಿಂದ ಬುರುಡೆ ಹುಡುಕಿ ತಂದುಕೊಟ್ಟಿದ್ದ ಎಂಬ ಅಂಶ ಎಸ್ಐಟಿ ತನಿಖೆಯಲ್ಲಿ ಬಯಲಾಗಿದೆ. ಇದೀಗ ಎಸ್ಐಟಿ ಅಧಿಕಾರಿಗಳು ವಿಠಲ ಗೌಡನನ್ನು ಬಂಧಿಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ