ಕಲಬುರಗಿ: ತಾನು ಬೆಳೆದ ತೊಗರಿ ಬೆಳೆ ಒಣಗಿ ಹಾಳಾಗಿದೆ ಎಂದು ರೈತನೊಬ್ಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಿ ಕಷ್ಟ ಹೇಳಿಕೊಂಡು ಬಂದರೆ ನಿಂದು ಅಷ್ಟೇನಾ ನಂದು 40 ಎಕ್ರೆ ಹಾಳಾಗಿದೆ ಎಂದು ಕೂಗಾಡಿದ್ದಾರೆ. ಇದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ನೋಡಿ.
ನಿನ್ನೆ ಯುವ ರೈತನೊಬ್ಬ ಒಣಗಿದ ತೊಗರಿ ಗಿಡದ ಸಮೇತ ಖರ್ಗೆ ಮುಂದೆ ಕಷ್ಟ ಹೇಳಲು ಬಂದಿದ್ದ. ನನ್ನ 4 ಎಕರೆ ತೊಗರಿ ಬೆಳೆ ನಾಶವಾಗಿದೆ ಎಂದು ರೈತ ಅಳಲು ತೋಡಿಕೊಂಡಿದ್ದ. ಆದರೆ ಆತನ ಅಳಲು ಕೇಳುವ ಬದಲು ಖರ್ಗೆ ಕೂಗಾಡಿದ್ದಾರೆ.
ನನ್ನದು 40 ಎಕರೆ ಹಾಳಾಗಿದೆ. ಬರೀ ತೊಗರಿ ಅಲ್ಲ, ಉದ್ದು, ಸೂರ್ಯಕಾಂತಿ ಕೂಡಾ ನಾಶವಾಗಿದೆ. ನೀನು ಇಲ್ಲಿ ಬರೀ ಪ್ರಚಾರ ತೆಗೆದುಕೊಳ್ಳಲು ಬರಬೇಡ ಎಂದು ಕೇವಲವಾಗಿ ಮಾತನಾಡಿದ್ದಾರೆ. ಇದಕ್ಕೆ ಖರ್ಗೆ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ನಿಮಗೆ 40 ಎಕರೆ ನಾಶವಾದರೂ ದೊಡ್ಡ ನಷ್ಟವೇನೂ ಆಗಲ್ಲ. ಆದರೆ ಆ ಬಡ ರೈತನಿಗೆ 4 ಎಕರೆ ನಾಶವಾದರೆ ಎಷ್ಟು ಕಷ್ಟ ಎಂದು ನಿಮಗೆ ಗೊತ್ತಿದೆಯಾ? ನಿಮ್ಮನ್ನು ಕಲಬುರಗಿ ಜನ ಮುಖಂಡ ಎಂದು ಹೇಗೆ ಹೇಳೋದು? ಜನರ ಕಷ್ಟ ಕೇಳಿಸಿಕೊಳ್ಳುವ ತಾಳ್ಮೆನೂ ಇರಲಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.