ಮಂಗಳೂರು: ಧರ್ಮಸ್ಥಳ ನಿಗೂಢ ಹತ್ಯೆಗಳ ತನಿಖೆ ಆರಂಭವಾಗುತ್ತಿದ್ದಂತೇ ಸುಜಾತ ಭಟ್ ಎಂಬ ವೃದ್ಧ ಮಹಿಳೆ ನನ್ನ ಮಗಳು ಧರ್ಮಸ್ಥಳಕ್ಕೆ ಬಂದವಳು ಕೊಲೆಯಾಗಿದ್ದಳು. ಅವಳ ಅಸ್ಥಿಯನ್ನು ಕೊಡಿ ಅಂತ್ಯಸಂಸ್ಕಾರ ಮಾಡಬೇಕು ಎಂದು ಅಳಲು ತೋಡಿಕೊಂಡಿದ್ದರು. ಆದರೆ ಇದೀಗ ಆಕೆ ತನ್ನ ಮಗಳು ಎಂದು ಬಿಡುಗಡೆ ಮಾಡಿರುವ ಫೋಟೋದ ಅಸಲಿಯತ್ತು ಬಯಲಾಗುತ್ತಿದೆ.
ಸುಜಾತ ಭಟ್ ಗೆ ಮಕ್ಕಳೇ ಇರಲಿಲ್ಲ ಎಂದು ಆಕೆಯ ಸಂಬಂಧಿಕರು, ಊರಿನವರೇ ಹೇಳುತ್ತಾರೆ. ದಾಖಲೆಗಳಲ್ಲೂ ಆಕೆಗೆ ಮಗಳಿರುವ ಬಗ್ಗೆ ಪೊಲೀಸರಿಗೇ ಸುಳಿವು ಸಿಕ್ಕಿರಲಿಲ್ಲ. ಹೀಗಿರುವಾಗ ನಿಮಗೆ ಮಗಳಿದ್ದಳು ಎಂಬುದಕ್ಕೆ ಪುರಾವೆ ತೋರಿಸಿ ಎಂದಿದ್ದಕ್ಕೆ ಸುಜಾತ ಭಟ್ ಫೋಟೋವೊಂದನ್ನು ಬಿಡುಗಡೆ ಮಾಡಿ ಇವಳೇ ನನ್ನ ಮಗಳು ಎಂದಿದ್ದರು.
ಆದರೆ ಇದೀಗ ಆ ಫೋಟೋ ಹಿಂದಿನ ರಹಸ್ಯವೂ ಬಯಲಾಗುತ್ತಿದೆ. ಅಸಲಿಗೆ ಸುಜಾತ ಭಟ್ ಬಿಡುಗಡೆ ಮಾಡಿರುವ ಫೋಟೋ ಆಕೆ ಬೆಂಗಳೂರಿನಲ್ಲಿ ಮನೆಯೊಂದರಲ್ಲಿ ಕೇರ್ ಟೇಕರ್ ಆಗಿ ಕೆಲಸಕ್ಕಿದ್ದಾಗ ಆ ಮನೆಯವಳಾಗಿದ್ದ ಯುವತಿಯ ಫೋಟೋ ಎನ್ನಲಾಗುತ್ತಿದೆ.
ಹೀಗಾಗಿ ಈಗ ಸುಜಾತ ಭಟ್ ತನ್ನ ಮಗಳು ಕೊಲೆಯಾಗಿದ್ದಾಳೆ ಎಂದು ಹೇಳುತ್ತಿರುವ ಇಡೀ ಸನ್ನಿವೇಶದ ಬಗ್ಗೆಯೇ ಎಲ್ಲರಿಗೂ ಅನುಮಾನ ಮೂಡಿದೆ. ಈ ಬಗ್ಗೆ ಎಸ್ಐಟಿ ತಂಡ ಕೂಲಂಕುಷವಾಗಿ ತನಿಖೆ ನಡೆಸಬೇಕಿದೆ.