ಕರ್ನಾಟಕ ಗೃಹ ಸಚಿವ ಅರಗ ಜ್ಞಾನೇಂದ್ರ ಮತ್ತು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಇಬ್ಬರೂ ಕೋಮು ಗಲಭೆಗೆ ಪ್ರಚೋದನೆಯಾಗುವ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಅವರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಲ್ಲಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಹಾಗೆಯೇ, ಜ್ಞಾನೇಂದ್ರ ಅವರು ಸಂಪುಟದಲ್ಲಿರುವುದು ಸರ್ಕಾರಕ್ಕೆ ಶೋಭೆಯಲ್ಲ ಅವರನ್ನು ಕೂಡಲೇ ವಜಾ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದರು. ಗೃಹ ಮಂತ್ರಿಗಳು ತಮ್ಮ ಹೇಳಿಕೆಗಾಗಿ ಕ್ಷಮಾಪಣೆ ಕೇಳಿದ ಮೇಲೂ ಚಂದ್ರು ತಾಯಿಯನ್ನು ಭೇಟಿಯಾಗಿದ್ದ ರವಿ ಅವರು ತಮಗೆ ಅನುಕೂಲವಾಗುವಂಥ ಮಾತನ್ನು ಆಕೆಯಿಂದ ಹೇಳಿಸಲು ಪ್ರಯತ್ನಿಸಿದರು ಎಂದು ಡಿಕೆಶಿ ಆರೋಪಿಸಿದ್ದಾರೆ.