ಶಿವಮೊಗ್ಗದಲ್ಲಿ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಯೊಬ್ಬ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜವನ್ನು ಹಾರಿಸಿದ್ದಾನೆ. ಆತನ ಜೊತೆಗಿದ್ದ ಗುಂಪು ಇದನ್ನು ಸಂಭ್ರಮ ಎಂಬಂತೆ ಕುಣಿದು ಕುಪ್ಪಳಿಸಿವೆ. ಆದರೆ ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಮತ್ತು ಯಾರನ್ನೂ ಬಂಧಿಸದೇ ಇರುವುದು ಪೊಲೀಸರ ದೌರ್ಬಲ್ಯ ಮತ್ತು ಇದರ ಹಿಂದೆ ಅಡಗಿರುವ ರಾಜಕೀಯ ಸೂಕ್ಷ್ಮತೆಯನ್ನು ತೋರಿಸುತ್ತದೆ.
ಇದರ ನಡುವೆ ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ಆಗಿದ್ದರೆ, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ. ದಾವಣಗೆರೆಗೂ ಇದು ವ್ಯಾಪಿಸಿದ್ದು, ಜಿಲ್ಲಾಧಿಕಾರಿ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ಆದರೆ ಬಾಗಲಕೋಟೆ, ಕುಂದಾಪುರ, ಕೋಲಾರ, ಮಂಡ್ಯ ಮುಂತಾದೆಡೆ ಪರಿಸ್ಥಿತಿ ಕೈ ಮೀರುವ ಹಂತ ತಲುಪುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿಸಿ ನಾಗೇಶ್ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ, ಘಟನೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸುತ್ತಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಿ ಸಮಾಜದಲ್ಲಿ ಶಾಂತಿ ಕಾಪಾಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ವಿರೋಧ ಪಕ್ಷದ ನಾಯಕರಂತೆ ಆರೋಪ ಮಾಡುತ್ತಿರುವುದು ವಿಪರ್ಯಾಸ.