ದೆಹಲಿ: ನಿಮ್ಮ ಮನೆಗೆ ನಾವು, ನಮ್ಮ ಮನೆಗೆ ನೀವು ಬರುವುದು ರಾಜಕೀಯದಲ್ಲಿ ಸಾಮಾನ್ಯ. ನಾನೂ ಸಹ ಆಗಾಗ್ಗೆ ಔತಣಕೂಟ, ಸಭೆ ಕರೆಯುತ್ತಿರುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ನಿಮ್ಮ ವಿದೇಶಿ ಪ್ರವಾಸದ ವೇಳೆಯಲ್ಲೇ ರಾಜ್ಯದಲ್ಲಿ ಡಿನ್ನರ್ ರಾಜಕೀಯ ನಡೆದಿದೆಯೇ ಎಂದು ಕೇಳಿದಾಗ, “ಮಾಧ್ಯಮದವರು ಔತಣಕೂಟಕ್ಕೆ ಏಕೆ ರಾಜಕಾರಣ ಬೆರೆಸುತ್ತೀರಿ? ಇದಕ್ಕೆ ಇಲ್ಲಸಲ್ಲದ ಅರ್ಥವನ್ನು ಏಕೆ ಕಲ್ಪಿಸುತ್ತೀರಿ? ನಾನು ಕಳೆದ ನಾಲ್ಕೈದು ವರ್ಷಗಳಿಂದ ಕುಟುಂಬದವರ ಜೊತೆ ಎಲ್ಲಿಯೂ ಹೋಗಿರಲಿಲ್ಲ. ಆದ ಕಾರಣಕ್ಕೆ ವಿದೇಶಿ ಪ್ರವಾಸಕ್ಕೆ ತೆರಳಿದ್ದೆ” ಎಂದರು.
ಕ್ಯಾಬಿನೆಟ್ ಪುನರ್ ರಚನೆಯಾಗಬೇಕು ಎಂದು ಎಚ್.ಕೆ.ಪಾಟೀಲ್ ಅವರು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ ಎಂದಾಗ, “ಯಾವ ಚರ್ಚೆಯೂ ನಡೆದಿಲ್ಲ. ಮಾಧ್ಯಮದವರಿಗೆ ಯಾರೋ ತಪ್ಪು ಮಾಹಿತಿ ನೀಡಿ, ನಿಮಗೆ ಬಿಡುವು ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಮಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಇದರ ಬಗ್ಗೆ ಮಾತನಾಡುತ್ತಾರೆ” ಎಂದರು.
ರಾಜ್ಯದಲ್ಲಿ ಎಂಟು ತಿಂಗಳ ಮಗುವಿನಲ್ಲಿ ಎಚ್ ಎಂವಿ ವೈರಸ್ ಪತ್ತೆಯಾಗಿರುವ ಬಗ್ಗೆ ಕೇಳಿದಾಗ, “ಈಗಾಗಲೇ ನಮ್ಮ ಆರೋಗ್ಯ ಸಚಿವರು ಕೆಲಸ ಮಾಡುತ್ತಿದ್ದಾರೆ. ಯಾರೂ ಸಹ ಆತಂಕಪಡುವ ಅವಶ್ಯಕತೆಯಿಲ್ಲ. ಸರ್ಕಾರ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ" ಎಂದು ಹೇಳಿದರು.