ಬೆಂಗಳೂರು: ಅತ್ತ ಡಿಸಿಎಂ ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿರಬೇಕಾದರೆ ಇತ್ತ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರೊಂದಿಗೆ ರಹಸ್ಯ ಡಿನ್ನರ್ ಮೀಟ್ ಮಾಡಿರುವುದು ಕುತೂಹಲ ಮೂಡಿಸಿದೆ.
ಡಿಸಿಎಂ ಡಿಕೆ ಶಿವಕುಮಾರ್ ಹೊಸ ವರ್ಷಾಚರಣೆ ನಿಮಿತ್ತ ತಮ್ಮ ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಆದರೆ ಇತ್ತ ಬೆಳಗಾವಿಯಲ್ಲಿ ಸಿಎಂ ಆಪ್ತ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟ್ ನಡೆದಿದೆ.
ಸಭೆಯಲ್ಲಿ ಸಿಎಂ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಕೆಎನ್ ರಾಜಣ್ಣ, ಮಹದೇವಪ್ಪ, ಗೃಹ ಸಚಿವ ಪರಮೇಶ್ವರ್ ಮುಂತಾದವರು ಪಾಲ್ಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿರುವಾಗಲೇ ಸಿಎಂ ಈ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜೊತೆಗೆ ಸಂಪುಟ ಪುನರಾಚನೆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಸಭೆಯಲ್ಲಿ ನಡೆಸಿರುವ ಮಾತುಕತೆ ಬಗ್ಗೆ ಸ್ಪಷ್ಟವಾಗಿ ಯಾವುದೇ ಗುಟ್ಟು ಹೊರಗೆ ಬಿಟ್ಟುಕೊಟ್ಟಿಲ್ಲ. ಆದರೆ ಡಿಕೆಶಿ ಗೈರಾಗಿರುವಾಗ ಈ ಮೀಟಿಂಗ್ ನಡೆಸಿರುವುದು ಹುಬ್ಬೇರುವಂತೆ ಮಾಡಿದೆ.
ಸದ್ಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಅವರನ್ನು ಬದಲಾವಣೆ ಮಾಡಿ ಬೇರೆಯವರಿಗೆ ಅವಕಾಶ ಕೊಡಬೇಕು ಎಂದು ಪಕ್ಷದೊಳಗೆ ಅಭಿಪ್ರಾಯಗಳಿವೆ. ಹೀಗಾಗಿ ಯಾರು ಅಭ್ಯರ್ಥಿಯಾಗಬೇಕು ಎನ್ನುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿರುವ ಸಾಧ್ಯತೆಯಿದೆ.