ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಿನ್ನೆ ತಡರಾತ್ರಿ ಸುರಿದ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ಹಾನಿಗೀಡಾದ ಪ್ರದೇಶಗಳ ಪರಿಶೀಲನೆ ನಡೆಸಿದರು.
ಇಂದು ಮಧ್ಯಾಹ್ನ ತಮ್ಮ ಆಪ್ತರೊಂದಿಗೆ ಸಿಟಿ ರೌಂಡ್ಸ್ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ಮಳೆಯಿಂದ ಜಲಾವೃತವಾಗಿದ್ದ ರಸ್ತೆಗಳು, ಅಂಡರ್ ಪಾಸ್ ಗಳ ಪರಿಶೀಲನೆ ನಡೆಸಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮರುಕಳಿಸದೇ ಇರಲು ಏನು ಕ್ರಮ ಕೈಗೊಳ್ಳಬಹುದು ಎಂದು ಪರಿಶೀಲನೆ ನಡೆಸಿದರು.
ಎಚ್ ಬಿಆರ್ ಲೇಔಟ್, ಹೆಬ್ಬಾಳ ಅಂಡರ್ ಪಾಸ್, ಸಿಲ್ಕ್ ಬೋರ್ಡ್ ಜಂಕ್ಷನ್, ಜಯದೇವ ಆಸ್ಪತ್ರೆ ಜಂಕ್ಷನ್, ಕೆಆರ್ ಮಾರುಕಟ್ಟೆ ಸೇರಿದಂತೆ ನಿನ್ನೆ ಸುರಿದ ಮಳೆಗೆ ನೀರು ತುಂಬಿಕೊಂಡ ಪ್ರದೇಶಗಳಿಗೆ ಡಿಕೆ ಶಿವಕುಮಾರ್ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳೂ ಅವರಿಗೆ ಸಾಥ್ ನೀಡಿದ್ದರು.
ಭಾರೀ ಮಳೆಯಿಂದಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಇಂದು ವಿಪರೀತ ಎನಿಸುವಷ್ಟು ಸಂಚಾರ ದಟ್ಟಣೆಯಿತ್ತು. ಇದರಿಂದಾಗಿ ಜನ ಕಚೇರಿ, ಶಾಲಾ-ಕಾಲೇಜುಗಳಿಗೆ ತೆರಳಲು ಪರದಾಡುವಂತಾಯಿತು. ಅಲ್ಲದೆ, ಹಲವೆಡೆ ಅಂಡರ್ ಪಾಸ್ ಗಳಲ್ಲಿ ನೀರು ತುಂಬಿ ವಾಹನ ಸವಾರರೂ ಸಂಕಷ್ಟ ಎದುರಿಸಿದರು.