ಬೆಂಗಳೂರು: ಬಿಜೆಪಿ, ಜೆಡಿಎಸ್ ಪಾದಯಾತ್ರೆ ಮುಗಿದರೂ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವಿನ ಕೆಸರೆರಚಾಟ ಮಾತ್ರ ನಿಂತಿಲ್ಲ. ಇವರಿಬ್ಬರ ಗುದ್ದಾಟ ಸಾರ್ವಜನಿಕರಿಗೆ ಪುಕ್ಸಟೆ ಮನರಂಜನೆ ನೀಡುತ್ತಿದೆ.
ಮೊನ್ನೆಯಷ್ಟೇ ಪಾದಯಾತ್ರೆ ಸಂದರ್ಭದಲ್ಲಿ ಇಬ್ಬರ ವಾಕ್ಸಮರ ಏಕವಚನಕ್ಕಿಳಿದಿತ್ತು. ಇಬ್ಬರೂ ಗಂಡಸ್ತನದ ಮಾತನಾಡಿದ್ದರು. ಗಂಡಸ್ತನದ ರಾಜಕಾರಣ ಮಾಡಿ ಎಂದು ಕುಮಾರಸ್ವಾಮಿ ಹೇಳಿದರೆ ನಾವು ಯಾರೂ ಗಂಡಸರಲ್ಲ, ಕುಮಾರಸ್ವಾಮಿ ಮಾತ್ರ ಗಂಡಸರು ಎಂದಿದ್ದರು. ಪ್ರಜ್ವಲ್ ರೇವಣ್ಣ ವಿರುದ್ಧ ಪೆನ್ ಡ್ರೈವ್ ತಯಾರಿಸಿದ್ದು ನೀವೇ ಅಂತ ಇಬ್ಬರೂ ಕಿತ್ತಾಡಿಕೊಂಡಿದ್ದರು.
ಇದು ಇಷ್ಟಕ್ಕೇ ನಿಂತಿಲ್ಲ. ತುಂಗಭದ್ರಾ ಡ್ಯಾಮ್ ನ ಕ್ರಸ್ಟ್ ಗೇಟ್ ಚೈನ್ ಕಟ್ ಆಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವ ಬೆನ್ನಲ್ಲೇ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕೆಆರ್ ಎಸ್ ಜಲಾಶಯದ ಸ್ಥಿತಿ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು.
ಅದಕ್ಕೀಗ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಜಲಾಶಯಗಳ ಬಗ್ಗೆ ಕುಮಾರಸ್ವಾಮಿಗೆ ಏನು ಗೊತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ಎಲ್ಲಾ ಜಲಾಶಯಗಳ ಬಗ್ಗೆ ಒಂದು ಸಮಿತಿ ರಚಿಸಿ ಅವುಗಳ ಸ್ಥಿತಿಗತಿ ಬಗ್ಗೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.