ಬೆಂಗಳೂರು: ನಾನೆಲ್ಲೂ ಹೋಗಲ್ಲ ಎನ್ನುತ್ತಲೇ ಇದ್ದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ದಿಡೀರ್ ದೆಹಲಿಗೆ ಹೋಗಿದ್ದಾರೆ. ನಿನ್ನೆಯೇ ಅವರು ದೆಹಲಿಗೆ ಹೋಗಿದ್ದು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಗುಸು ಗುಸು ಚರ್ಚೆ ಶುರುವಾಗಿದೆ.
ರಾಜ್ಯದಲ್ಲಿ ಈಗ ನವಂಬರ್ ಕ್ರಾಂತಿ ವಿಚಾರ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆ ಯತೀಂದ್ರ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕತ್ವದ ಬಗ್ಗೆ ನೀಡಿದ್ದ ಹೇಳಿಕೆ ಭಾರೀ ಸದ್ದು ಮಾಡಿತ್ತು. ಇದರ ನಡುವೆ ಸಂಪುಟ ವಿಸ್ತರಣೆ ವಿಚಾರವೂ ಭಾರೀ ಚರ್ಚೆಯಲ್ಲಿದೆ.
ಇದೆಲ್ಲಾ ಬೆಳವಣಿಗೆ ನಡುವೆ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು ಕುತೂಹಲ ಕೆರಳಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಚರ್ಚೆ ಬಗ್ಗೆ ಹೈಕಮಾಂಡ್ ಗೆ ವರದಿ ಸಲ್ಲಿಸಬಹುದು ಎನ್ನಲಾಗಿದೆ. ಇದಲ್ಲದೆ ಗಾಂಧಿ ಭಾರತ್ ಶತಮಾನೋತ್ಸವಕ್ಕೆ 100 ಕಾಂಗ್ರೆಸ್ ಕಚೇರಿಗಳಿಗೆ ಶಂಕು ಸ್ಥಾಪನೆ ಮಾಡಲು ಯೋಜನೆ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ರಾಹುಲ್ ಗಾಂಧಿಯವರನ್ನು ಆಹ್ವಾನಿಸಲಾಗಿದೆ. ಈ ಸಂಬಂಧ ಚರ್ಚೆ ಮಾಡುವ ಇರಾದೆಯೂ ಡಿಕೆಶಿಗಿದೆ ಎನ್ನಲಾಗಿದೆ.
ಆದರೆ ಬಿಹಾರ ಚುನಾವಣೆ ಮುಗಿಯುವವರೆಗೂ ಕರ್ನಾಟಕದಲ್ಲಿ ನಾಯಕತ್ವ ವಿಚಾರವಾಗಿ ಮೌನಕ್ಕೆ ಶರಣಾಗಲು ಹೈಕಮಾಂಡ್ ತೀರ್ಮಾನಿಸಿದೆ. ಹಾಗಿದ್ದರೂ ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ತಿಯಾಗುತ್ತಿರುವ ಬೆನ್ನಲ್ಲೇ ಡಿಕೆಶಿ ದೆಹಲಿಗೆ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.