ಬೆಂಗಳೂರು: ಸಿದ್ದರಾಮಯ್ಯ ನಂತರ ಕಾಂಗ್ರೆಸ್ ಗೆ ಸತೀಶ್ ಜಾರಕಿಹೊಳಿ ನೇತೃತ್ವ ಎಂದಿದ್ದ ಯತೀಂದ್ರ ಸಿದ್ದರಾಮಯ್ಯಗೆ ಕೊನೆಗೂ ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಭಾರೀ ಬಹುಮತದೊಂದಿಗೆ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಡಿಕೆ ಶಿವಕುಮಾರ್ ಶ್ರಮ ಸಾಕಷ್ಟಿದೆ. ಹೀಗಾಗಿ ಅವರು ಸಿಎಂ ಹುದ್ದೆ ಆಕಾಂಕ್ಷಿಗಳಾಗಿದ್ದಾರೆ. ಇಷ್ಟು ಸಮಯದಿಂದಲೂ ತಾಳ್ಮೆಯಿಂದ ಕಾಯುತ್ತಲೇ ಇದ್ದಾರೆ.
ಆದರೆ ಇದರ ನಡುವೆ ಯತೀಂದ್ರ ಸಿದ್ದರಾಮಯ್ಯ ಕಾರ್ಯಕ್ರಮವೊಂದರಲ್ಲಿ ನಮ್ಮ ತಂದೆ ರಾಜಕೀಯದ ಸಂಧ್ಯಾಕಾಲದಲ್ಲಿದ್ದಾರೆ. ಅವರ ನಂತರ ಕಾಂಗ್ರೆಸ್ ಗೆ ಪ್ರಗತಿ ಪರ ಚಿಂತನೆಯುಳ್ಳ ಸತೀಶ್ ಜಾರಕಿಹೊಳಿ ನಾಯಕತ್ವ ಸೂಕ್ತ ಎಂದಿದ್ದರು. ಅವರ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಸಂಚಲನ ಸೃಷ್ಟಿಸಿದೆ. ಹಾಗಿದ್ದರೆ ಡಿಕೆ ಶಿವಕುಮಾರ್ ಶ್ರಮಕ್ಕೆ ಬೆಲೆಯೇ ಇಲ್ಲವೇ ಎಂದು ಡಿಕೆಶಿ ಬಣ ಸಿಟ್ಟಾಗಿದೆ.
ನಾಯಕತ್ವದ ಬಗ್ಗೆ ಬಹಿರಂಗ ಹೇಳಿಕೆ ನೀಡಿರುವ ಯತೀಂದ್ರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಅಗ್ರಹದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಈ ಬಗ್ಗೆ ನಾನು ಮಾತನಾಡುವುದಿಲ್ಲ. ಎಲ್ಲಿ ಯಾರ ಬಳಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ. ನಾನು ಶಿಸ್ತಿನ ಜೊತೆ ನಿಲ್ಲುತ್ತೇನೆ. ಶಿಸ್ತೇ ನನ್ನ ಪಕ್ಷದ ಆದ್ಯತೆ ಎಂದಿದ್ದಾರೆ.
ಇನ್ನು ಬಹಿರಂಗವಾಗಿ ಹೇಳಿಕೆ ನೀಡದೇ ಇದ್ದರೂ ಡಿಕೆ ಶಿವಕುಮಾರ್ ಈ ಬಗ್ಗೆ ಹೈಕಮಾಂಡ್ ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಹಲವರು ಬಹಿರಂಗ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಯತೀಂದ್ರ ಸೇರಿದಂತೆ ಬಹಿರಂಗ ಹೇಳಿಕೆ ನೀಡುವವರ ವಿರುದ್ಧ ಕೆಪಿಸಿಸಿ ವತಿಯಿಂದ ವರದಿ ಸಲ್ಲಿಕೆಯಾಗಿದೆ.