ಬೆಂಗಳೂರು: ಒಂದೆಡೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಉರುಳಾಗಿದ್ದರೆ ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ.
ಇಂದು ಕನಕಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಪರೋಕ್ಷವಾಗಿ ಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಈಗ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ ಕೇಳಿಬರುತ್ತಿರುವ ಬೆನ್ನಲ್ಲೇ ಡಿಕೆಶಿ ಇಂತಹದ್ದೊಂದು ಹೇಳಿಕೆ ನೀಡಿರುವುದು ವಿಶೇಷವಾಗಿದೆ.
ಕನಕಪುರ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ನಾನು ರಾಜ್ಯದ ಸೇವೆ ಮಾಡಬೇಕು ಎಂದು ದೊಡ್ಡ ಪ್ರಯತ್ನ ಮತ್ತು ಹೋರಾಟ ನಡೆಯುತ್ತಿದೆ. ಈಗ ನಾನು ಏನೇ ಮಾತನಾಡಿದರೂ ಅದಕ್ಕೆ ಇನ್ನೊಂದು ಅರ್ಥ ಕಲ್ಪಿಸುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅವರ ಈ ಮಾತಿನಲ್ಲಿ ಮುಂದೆ ಸಿಎಂ ಆಗುವ ಕನಸಿದೆ ಎಂಬ ಒಳಾರ್ಥವಿದೆ.
ಕನಕಪುರ ನನ್ನ ಮನೆಯಿದ್ದಂತೆ. ನಾನು ಇಲ್ಲಿಗೆ ಕೇವಲ ಶಾಸಕನಾಗಿ ಬಂದಿದ್ದೇನೆ. ನೀವೆಲ್ಲಾ ನನ್ನ ಮನೆಯ ಮಕ್ಕಳು. ನಾನು ಶಾಸಕನಾಗುವುದಕ್ಕೆ ಮೊದಲು ಕನಕಪುರ ಹೇಗಿತ್ತು, ಈಗ ಹೇಗಾಗಿದೆ ನೋಡಿ. ರಸ್ತೆ ಕಟ್ಟಡಗಳು ಮಾಡಿಸಿದ್ದೇನೆ. ನಮ್ಮ ಮಕ್ಕಳಿಗೆ ಹಾರೈಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.