ಬೆಂಗಳೂರು: ಜನ ಬೈದರೂ ಪರವಾಗಿಲ್ಲ ನೀರಿನ ದರ ಹೆಚ್ಚಳ ಮಾಡುವುದು ಅನಿವಾರ್ಯ, ಮಾಡಿಯೇ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಾವೇರಿ ಸಂಪರ್ಕ ಅಭಿಯಾನದಲ್ಲಿ ಮಾಧ್ಯಮಗಳ ಮುಂದೆ ಅವರು ಈ ಮಾತು ಹೇಳಿದ್ದಾರೆ.
ವಿಧಾನಸೌಧದ ಮುಂಭಾಗ ನಡೆದ ಕಾವೇರಿ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾಧ್ಯಮದವರಾದರೂ ಬೈಯಲಿ, ಜನರಾದರೂ ಬೈಯಲಿ, ವಿಪಕ್ಷಗಳು ಟೀಕೆ ಮಾಡಲಿ ಕೇರ್ ಮಾಡಲ್ಲ. ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇವೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ವೇದಿಕೆ ಮೇಲೆಯೇ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ. ಕಳೆದ ಸುಮಾರು ವರ್ಷದಿಂದ ನೀರಿನ ದರ ಹೆಚ್ಚಳ ಮಾಡಿಲ್ಲ. ನೀರಿನ ದರ ಎಷ್ಟು ಹೆಚ್ಚಳ ಮಾಡಬಹುದು ಎಂದು ಮಾಹಿತಿ ಕೊಡಿ ಎಂದಿದ್ದಾರೆ. ಹೀಗಾಗಿ ಈ ಬಾರಿ ನೀರಿನ ದರ ಹೆಚ್ಚಳ ಮಾಡುವುದು ಖಚಿತವಾಗಿದೆ.
ನಾಗರಿಕರಿಗೆ ಉಪಕಾರ ಸ್ಮರಣೆ ಇಲ್ಲ. ಎಷ್ಟೇ ಉಚಿತ ಕೊಟ್ಟರೂ ಒಳ್ಳೆಯದು ಮಾಡಿದರೂ ಬೈಯೋದು, ಕಾಮೆಂಟ್ ಮಾಡುವುದು ತಪ್ಪಿದ್ದಲ್ಲ. ಕೆಲವರು ಬಿಲ್ ಪಾವತಿ ಮಾಡುತ್ತಾರೆ, ಮತ್ತೆ ಕೆಲವರು ಮಾಡಲ್ಲ. 8-9 ವರ್ಷದಿಂದ ನೀರಿನ ದರ ಹೆಚ್ಚಳ ಮಾಡಿಲ್ಲ. ಹೀಗಾಗಿ ಜಲಮಂಡಳಿ ನಷ್ಟದಲ್ಲಿದೆ. ಸಂಬಳ ಕೊಡುವುದಕ್ಕೆ, ಕರೆಂಟ್ ಬಿಲ್ ಕಟ್ಟುವುದಕ್ಕೂ ಆಗುತ್ತಿಲ್ಲ. ಹೀಗಾಗಿ ಸಮಿತಿ ಸಭೆ ನಡೆಸಿ ಎಷ್ಟು ದರ ಹೆಚ್ಚಳ ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.