ಬೆಂಗಳೂರು: ನನ್ನ ಬಗ್ಗೆ ಯಾವ ಗುರೂಜಿ, ಸ್ವಾಮೀಜಿ ಎಲ್ಲಾ ಭವಿಷ್ಯ ಹೇಳೋದು ಬೇಕಿಲ್ಲ ಎಂದು ಡಿಕೆ ಶಿವಕುಮಾರ್ ಖಡಕ್ ಆಗಿ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ವಿನಯ್ ಗುರೂಜಿ ಡಿಕೆ ಶಿವಕುಮಾರ್ ಮುಂದೆ ಸಿಎಂ ಆಗಿಯೇ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಈ ಬಗ್ಗೆ ಮಾಧ್ಯಮಗಳು ಡಿಕೆಶಿಯನ್ನು ಪ್ರಶ್ನಿಸಿದಾಗ ಅವರು ಈ ರೀತಿ ಉತ್ತರ ಕೊಟ್ಟಿದ್ದಾರೆ.
ಇದೇ ಅವಧಿಯಲ್ಲಿ ಡಿಕೆಶಿ ಸಿಎಂ ಆಗುತ್ತಾರೆ ಎಂದು ವಿನಯ್ ಗುರೂಜಿ ಭವಿಷ್ಯ ನುಡಿದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ ನಾನು ಎಲ್ಲಾ ಸ್ವಾಮೀಜಿ, ಗುರೂಜಿಗಳಿಗೆ ವಿನಂತಿ ಮಾಡ್ತೀನಿ, ನಮ್ಮ ಸರ್ಕಾರದ ವಿಚಾರದಲ್ಲಿ ತಮ್ಮ ಯಾವ ಹೇಳಿಕೆಯೂ ಬೇಡ. ನಮ್ಮ ಸರ್ಕಾರ ಸುಭದ್ರವಾಗಿ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಕೆಲಸ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ನಮ್ಮ ಬಗ್ಗೆ ಯಾರೂ ಭವಿಷ್ಯ ನುಡಿಯುವುದು ಬೇಕಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.
ಇನ್ನು ಅಧಿಕಾರ ಹಂಚಿಕೆ ಬಗ್ಗೆ ಕೇಳಿದಾಗ, ಯಾವ ಪವರ್ ಶೇರಿಂಗ್ ಇಲ್ಲ. 5 ವರ್ಷ ಕಾಂಗ್ರೆಸ್ ಸರ್ಕಾರವೇ ನಡೆಯುತ್ತದೆ ಎಂದಿದ್ದಾರೆ. ಆದರೆ ಸಿಎಂ ಬದಲಾವಣೆ ಬಗ್ಗೆ ನೇರವಾಗಿ ಏನೂ ಹೇಳಲು ಹೋಗಿಲ್ಲ.